*ಗೋಣಿಕೊಪ್ಪ, ನ. 23: ಸರ್ಕಾರ ನನಗೆ ಸಚಿವ ಸ್ಥಾನ ನೀಡಿಲ್ಲ ಎಂಬ ಕಾರಣದಿಂದ ನಾನು ಜಿಲ್ಲೆಯ ಅಭಿವೃದ್ಧಿಗೆ ಕೇಳಿದ ಅನುದಾನವನ್ನು ಬಿಡುಗಡೆ ಮಾಡುತ್ತಿದೆ. ಹೀಗಾಗಿ ಸಚಿವ ಸ್ಥಾನ ಇಲ್ಲದಿದ್ದರೂ ಜಿಲ್ಲೆಯ ಅಭಿವೃದ್ಧಿ ಮಾಡಲು ಯಾವುದೇ ತೊಡಕು ಎದುರಾಗುತ್ತಿಲ್ಲ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದ್ದಾರೆ.
ನಿಟ್ಟೂರು ಗ್ರಾಪಂ ವ್ಯಾಪ್ತಿಯ ತÀಟ್ಟೆಕೆರೆ, ಮಲ್ಲೂರು ಗ್ರಾಮ ಸಂಪರ್ಕ ಬೆಸೆಯುವ 10 ಕೋಟಿ 50ಲಕ್ಷ ಅನುದಾನದಲ್ಲಿ ನಿರ್ಮಾಣ ವಾಗುತ್ತಿರುವ ನೂತನ ಸೇತುವೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಕೊರೊನಾ ಪರಿಸ್ಥಿತಿಯಿಂದಾಗಿ ಸರ್ಕಾರದ ಆರ್ಥಿಕ ಪರಿಸ್ಥಿತಿ ಕುಸಿತ ಕಂಡಿರುವುದು ನಿಜ.ಹೀಗಾಗಿ, ನಿಧಾನ ವಾಗಿ ಸರ್ಕಾರ ಸುಧಾರಿಸಿಕೊಳ್ಳುತ್ತಿದೆ. ಜಿಲ್ಲೆಗೆ 500 ಕೋಟಿ ಅನುದಾನವನ್ನು ಬಜೆಟ್‍ನಲ್ಲಿ ನೀಡಿತ್ತು. ಕೊರೊನಾ ಸಂಕಷ್ಟದಿಂದಾಗಿ ಮೊದಲ ಹಂತವಾಗಿ ನೂರು ಕೋಟಿ ಬಿಡುಗಡೆ ಮಾಡಿದೆ. ಹೀಗಾಗಿ ಹಂತಹಂತವಾಗಿ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಎಂದರು.
ಪ್ರಧಾನಮಂತ್ರಿ ರಸ್ತೆ ಅಭಿವೃದ್ಧಿಗೆ ರಾಜ್ಯ ಸರ್ಕಾರಕ್ಕೆ ನೀಡುವ ಅನುದಾನದಲ್ಲಿ ಗರಿಷ್ಠ ಪ್ರಮಾಣ 150 ಕೋಟಿ ಅನುದಾನವನ್ನು ಜಿಲ್ಲೆಯ ಅಭಿವೃದ್ಧಿಗೆ ಪಡೆದುಕೊಳ್ಳಲು ಯಾವುದೇ ಸಮಸ್ಯೆ ಇಲ್ಲ ಎಂದು ಭರವಸೆ ನೀಡಿದರು.
ಮಲ್ಲೂರು ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿ ನೂತನ ಸೇತುವೆ ನಿರ್ಮಾಣಕ್ಕೆ ಅನುದಾನ ತರಲಾಗಿದೆ; ಬಹಳಷ್ಟು ಅರ್ಜಿಗಳು ಇದ್ದರೂ ಲೋಕೋಪಯೋಗಿ ಇಲಾಖೆ ಸಚಿವರು ಬಹಳ ಅಗತ್ಯವಿರುವ ಬಹುಬೇಡಿಕೆಯ ಮಲ್ಲೂರು ಸೇತುವೆಗೆ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು. ಅಲ್ಲದೆ ಜಿಲ್ಲೆಯಲ್ಲಿ ಶಿಥಿಲಾವಸ್ಥೆ ಯಲ್ಲಿರುವ ಎಲ್ಲಾ ಸೇತುವೆಗಳಿಗೆ ಅನುದಾನ ತಂದು ನೂತನ ಸೇತುವೆ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ರೈತರ ಅನುಕೂಲಕ್ಕಾಗಿ ಡಿಸೆಂಬರ್ 30ರೊಳಗೆ ಭತ್ತ ಖರೀದಿ ಕೇಂದ್ರ ತೆರೆಯಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವುದಾಗಿ ಮಾಹಿತಿ ನೀಡಿದರು.
ಪೆÇನ್ನಂಪೇಟೆ ತಾಲೂಕು ಕಾರ್ಯನಿರ್ವಹಿಸಲು ತಹಶೀಲ್ದಾರ್ ನೇಮಕ ಮಾಡಲಾಗಿದೆ. ಹಂತಹಂತ ವಾಗಿ ಕಾರ್ಯ ಚಟುವಟಿಕೆಗಳು ಪ್ರಾರಂಭವಾಗುತ್ತದೆ. ತಾಲೂಕು ಪಂಚಾಯಿತಿ ಸೇರಿದಂತೆ ವಿವಿಧ ಇಲಾಖೆಗಳು ಕಾರ್ಯನಿರ್ವ ಹಿಸಲು ಮುಂದಿನ ಹಂತದಲ್ಲಿ ಕ್ರಮಕೈಗೊಳ್ಳ ಲಾಗುವುದು. ಪೆÇನ್ನಂಪೇಟೆ ತಾಲೂಕು ಶೀಘ್ರವಾಗಿ ಕಾರ್ಯನಿರ್ವ ಹಿಸುವುದಕ್ಕೆ 82 ಲಕ್ಷ ಮಂಜೂರಾತಿ ಮಾಡಿದೆ. ಮುಂದಿನ ಹಂತದಲ್ಲಿ ಹೆಚ್ಚಿನ ಅನುದಾನ ನೀಡಿ ಈ ಭಾಗದ ಜನತೆಗೆ ಎಲ್ಲಾ ಸೌಕರ್ಯಗಳು ಒಂದೆಡೆ ಸಿಗುವಂತೆ ಮಾಡುವ ವ್ಯವಸ್ಥೆ ಸರ್ಕಾರದ್ದಾಗಿದೆ ಎಂದರು.
ಬಾಳಲೆ ಕ್ಷೇತ್ರದ ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು ಮಾತನಾಡಿ, ಕಾಮಗಾರಿಯಲ್ಲಿ ಯಾವುದೇ ಲೋಪದೋಷಗಳು ಉಂಟಾಗದಂತೆ ಗ್ರಾಮಸ್ಥರು ಅದರ ಜವಾಬ್ದಾರಿಯನ್ನು ಹೊರಬೇಕು. ಹೆಚ್ಚಿನ ಅನುದಾನ ಬಿಡುಗಡೆಯಾಗಿದ್ದು ವ್ಯರ್ಥವಾಗದಂತೆ ಗ್ರಾಮಸ್ಥರು ಕಾಮಗಾರಿಯ ಮೇಲೆ ನಿಗಾವಹಿಸುವಂತೆ ಸಲಹೆ ನೀಡಿದರು.
ಜಿ.ಪಂ. ಮಾಜಿ ಸದಸ್ಯ ಅರಮಾಣಮಾಡ ರಂಜನ್, ಗ್ರಾಪಂ ಮಾಜಿ ಸದಸ್ಯ ಚೆಕ್ಕೆರ ಸೂರ್ಯ ಹಾಗೂ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷೆ ತಾರಾ ಅಯ್ಯಮ್ಮ, ಇವರುಗಳು ಶಾಸಕರು ಸೇತುವೆ ನಿರ್ಮಾಣಕ್ಕಾಗಿ ತಂದ ಅನುದಾನದ ಬಗ್ಗೆ ಹಾಗೂ ಅವರ ಪಾರದರ್ಶಕತೆಯ ತಾಲೂಕು ಅಭಿವೃದ್ಧಿಯ ನಿರ್ವಹಣೆಯ ಬಗ್ಗೆ ಶ್ಲಾಘಿಸಿದರು.
ಈ ಸಂದರ್ಭದಲ್ಲಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪುಳ್ಳಂಗಡ ಪವನ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿಮ್ಮಣಮಾಡ ಕೃಷ್ಣ ಗಣಪತಿ, ಬಾಳಲೆ ಶಕ್ತಿ ಕೇಂದ್ರದ ಅಧ್ಯಕ್ಷ ಸುಕೇಶ್, ನಿಟ್ಟೂರು ಶಕ್ತಿ ಕೇಂದ್ರದ ಅಧ್ಯಕ್ಷ ಕಾಟಿಮಾಡ ಶರಿನ್, ಕಾರ್ಯದರ್ಶಿ ಅದೇಂಗಡ ವಿನು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯ ಮಾಚಂಗಡ ಸುಜಾ ಪೂಣಚ್ಚ, ನಿಟ್ಟೂರು ಗ್ರಾಪಂ ಮಾಜಿ ಅಧ್ಯಕ್ಷೆ ಕಾಡ್ಯಮಾಡ ಅನಿತಾ, ಗ್ರಾಮದ ಹಿರಿಯರಾದ ಚಿಮ್ಮಣಮಾಡ ಮೇದಪ್ಪ, ಮಲ್ಚಿರಾ ಪೂನ್ನಪ್ಪ, ಚೆಕ್ಕೆರ ಜೋಯಪ್ಪ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ, ಮೈಸೂರು ವಿಭಾಗದ ಹಿರಿಯ ಇಂಜಿನಿಯರ್ ಧರ್ಮಗೌಡ್ರು, ಕಿರಿಯ ಇಂಜಿನಿಯರ್ ಶಿವಕುಮಾರ್, ವಿಶಾಲ್ ಮಾನಸ, ಗುತ್ತಿಗೆದಾರ ಹರೀಶ್ ಸೇರಿದಂತೆ ನೂರಕ್ಕೂ ಹೆಚ್ಚು ಗ್ರಾಮಸ್ಥರು ಹಾಜರಿದ್ದರು.