ಸಿದ್ದಾಪುರ, ನ. 23: ರಾತ್ರಿ ಸಮಯದಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರೊಂದಕ್ಕೆ ಹಾನಿಗೊಳಿಸಿ ನಷ್ಟಪಡಿಸಿರುವ ಘಟನೆ ಸಿದ್ದಾಪುರ ಸಮೀಪದ ಇಂಜಿಲಗೆರೆ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.

ಚೆಟ್ಟಳ್ಳಿಯ ನಿವಾಸಿ ಹಾಗೂ ಪತ್ರಕರ್ತ ಪಪ್ಪು ತಿಮ್ಮಯ್ಯ ಎಂಬವರು ಕುಟುಂಬದೊಂದಿಗೆ ವಿವಾಹಕ್ಕೆ ವೀರಾಜಪೇಟೆಗೆ ತೆರಳಿ ರಾತ್ರಿ ಸಮಯದಲ್ಲಿ ತಮ್ಮ ಮನೆಗೆ ಬರುತಿದ್ದ ಸಂದರ್ಭ ಇಂಜಿಲಗೆರೆ ಬಳಿ ಇವರಿಗೆ ಸೇರಿದ ಸ್ಕಾರ್ಪಿಯೋ ಕಾರು ದುರಸ್ತಿಗೀಡಾಗಿತ್ತು. ಈ ಸಂದರ್ಭ ಇಂಜಿಲಗೆರೆಯ ಯುವಕ ಹಾಗೂ ಕರಡಿಗೋಡಿನ ಬಾಲಕನೋರ್ವ ಸೇರಿ ದುರಸ್ತಿಯಾಗಿರುವ ಕಾರನ್ನು ನೋಡಿಕೊಳ್ಳುವುದಾಗಿ ತಿಳಿಸಿದರು.

ನಂತರ ಪಪ್ಪು ತಿಮ್ಮಯ್ಯ ಬೇರೆಯೊಂದು ವಾಹನದಲ್ಲಿ ತನ್ನ ಸಂಸಾರದೊಂದಿಗೆ ಚೆಟ್ಟಳ್ಳಿಗೆ ತೆರಳಿದ್ದರು. ಭಾನುವಾರ ಬೆಳಿಗ್ಗೆ ಪಪ್ಪು ತಿಮ್ಮಯ್ಯ ಇಂಜಿಲಗೆರೆಗೆ ಭೇಟಿ ನೀಡಿ ತನ್ನ ವಾಹನವನ್ನು ದುರಸ್ತಿಪಡಿಸಲೆಂದು ತೆರಳಿದ ಸಂದರ್ಭ ವಾಹನದ ಮುಂಭಾಗದ ಗಾಜು, ಹಾಗೂ ಫಾಗ್‍ಲೈಟ್, ಮಿರರ್‍ಗಳನ್ನು ಹಾನಿಗೊಳಿಸಿರುವುದು ಕಂಡು ಬಂತು. ಈ ಬಗ್ಗೆ ಪಪ್ಪು ತಿಮ್ಮಯ್ಯ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದರು. ನಂತರ ಕಾರನ್ನು ನೋಡಿಕೊಳ್ಳುವದಾಗಿ ಹೇಳಿದ್ದ ಯುವಕರ ಮನೆ ಇಂಜಿಲಗೆರೆಗೆ ತೆರಳಿ ಕಾರು ಹಾನಿಯಾಗಿರುವ ಬಗ್ಗೆ ವಿಚಾರಿಸಿದಾಗ ತಮಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಯುವಕರು ಸುಳ್ಳು ಹೇಳಿ ನುಣುಚಿಕೊಂಡರು. ಈ ವೇಳೆ ಕಾರಿನ ಮೇಲೆ ಕಾಲಿನಿಂದ ತುಳಿದು ಹಾನಿಗೊಳಿಸಿರುವ ಗುರುತುಗಳ ಆಧಾರದ ಮೇಲೆ ಯುವಕನ ಮನೆಯಲ್ಲಿದ್ದ ಶೂವೊಂದನ್ನು ಪರಿಶೀಲಿಸಿದಾಗ ಕಾರಿಗೆ ತುಳಿದ ಶೂವಿನ ಹೆಜ್ಜೆ ಗುರುತು ಪತ್ತೆಯಾಯಿತು. ನಂತರ ಪೊಲೀಸರಿಗೆ ವಿಚಾರ ತಿಳಿಸಿದ ಮೇರೆಗೆ ಪೊಲೀಸರು ಇಂಜಿಲಗೆರೆ ಯುವಕನನ್ನು ವಿಚಾರಣೆಗೆ ಒಳಪಡಿಸಿದರು.

ಈ ಸಂದರ್ಭದಲ್ಲಿ ಇಂಜಿಲಗೆರೆಯ ಯುವಕ ತಾನು ಈ ಕೃತ್ಯವನ್ನು ಸ್ನೇಹಿತನೊಂದಿಗೆ ಸೇರಿ ಮಾಡಿದ್ದು, ಕಾರಿಗೆ ಹಾನಿಯಾಗಿರುವ ಖರ್ಚು ವೆಚ್ಚಗಳನ್ನು ನಾವಿಬ್ಬರೂ ಭರಿಸುವುದಾಗಿ ತಮ್ಮ ಸಂಬಂಧಿಕರ ಸಮ್ಮುಖದಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಒಪ್ಪಿಕೊಂಡಿದ್ದಾನೆ.