ಕುಶಾಲನಗರ, ನ 24: ಕುಶಾಲನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಆಚರಣೆ 2021 ರಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಟಿ. ಆರ್. ಶರವಣಕುಮಾರ್ ತಿಳಿಸಿದರು. ಅವರು ಸ್ಥಳೀಯ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾಹಿತಿ ಒದಗಿಸಿದರು. ಈ ಹಿನ್ನಲೆಯಲ್ಲಿ ಕುಶಾಲನಗರ ವ್ಯಾಪ್ತಿಯಲ್ಲಿ ಸಂಘದ ಹೆಸರಿನಲ್ಲಿ 1 ಎಕರೆಯಷ್ಟು ಪರಿವರ್ತಿತ ಜಾಗ ಖರೀದಿಸಲು ಕಳೆದ ಮಹಾಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಶತಮಾನೋತ್ಸವ ಸವಿನೆನಪಿಗಾಗಿ ಉನ್ನತ ತಂತ್ರಜ್ಞಾನದೊಂದಿಗೆ ಸದಸ್ಯರ ಅನುಕೂಲಕ್ಕೆ ಸೂಕ್ತ ಸಂಚಾರಿ ಶಾಖೆಗಳನ್ನು ಪ್ರಾರಂಭಿಸುವ ಯೋಜನೆ ಕೈಗೊಳ್ಳಲಾಗುವುದು. ಎರಡು ದಿನಗಳ ಕಾಲ ಕಾರ್ಯಕ್ರಮ ಹಮ್ಮಿಕೊಂಡು ಶತಮಾನೋತ್ಸವ ಆಚರಿಸಲು ಕಾರ್ಯಯೋಜನೆ ರೂಪಿಸಲಾಗುತ್ತಿದೆ ಎಂದರು.
ಸಹಕಾರ ಸಂಘವು ಬಡ ಕೂಲಿ ಕಾರ್ಮಿಕರಿಗೆ, ಶ್ರಮಿಕ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಿ ಪಡೆವ ಬಡ್ಡಿಯ ಹಣದ ಲಾಭದಲ್ಲಿ ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆಗೆ ಶೇ. 32 ರಷ್ಟು ತೆರಿಗೆ ಪಾವತಿಸಬೇಕೆಂದು ನೋಟೀಸ್ ನೀಡುತ್ತಿರುವುದು ಬೇಸರ ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಶರವಣಕುಮಾರ್, ಸಹಕಾರ ಬ್ಯಾಂಕ್‍ಗಳು ಕಡ್ಡಾಯವಾಗಿ ತೆರಿಗೆ ಪಾವತಿಸಬೇಕೆಂಬ ನಿಯಮ ಸರಿಯಾದ ಕ್ರಮವಲ್ಲ ಎಂದರು. ಇದೇ ಸಂದರ್ಭ ಸಂಘದ ಸದಸ್ಯರ ಕುಟುಂಬಗಳ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಂಘದ ಉಪಾಧ್ಯಕ್ಷ ವಿ.ಎಸ್.ಆನಂದಕುಮಾರ್, ನಿರ್ದೇಶಕರಾದ ಪಿ.ಕಾರ್ತಿಸನ್, ಪಿ.ಬಿ.ಯತೀಶ್, ಎಂ.ಕೆ.ಗಣೇಶ್, ಅಬ್ದುಲ್ ಖಾದರ್, ಮಧುಸೂದನ್, ಡಿ.ವಿ.ರಾಜೇಶ್, ಮಧುಕುಮಾರ್, ಜಗದೀಶ್, ರಾಮಕೃಷ್ಣಯ್ಯ, ನೇತ್ರಾವತಿ, ಪಿ.ಎಂ.ಕವಿತ, ಸಂಘದ ಕಾರ್ಯ ನಿರ್ವಹಣಾಧಿಕಾರಿ ಲೋಕೇಶ್ ಬಿ.ಬಿ, ಸಂಘದ ಸದಸ್ಯರುಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.