ಮಡಿಕೇರಿ, ನ. 23: ಇಲ್ಲಿನ ಕೋಟೆ ಆವರಣದಲ್ಲಿ ಇರುವ ಕರ್ನಾಟಕ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ (ಮ್ಯೂಸಿಯಂ) ವೀಕ್ಷಣೆಗೆ ಬರುವ ಪ್ರವಾಸಿಗಳಿಗೆ ನಿನ್ನೆ ಯಿಂದ ಸರಕಾರ ಪ್ರವೇಶ ಶುಲ್ಕ ಜಾರಿಗೊಳಿಸಿದೆ.

ವಸ್ತು ಸಂಗ್ರಹಾಲ ಯದೊಳಗೆ ವೀಕ್ಷಣೆ ಮಾಡುವ ಪ್ರವಾಸಿಗಳಲ್ಲಿ ಹಿರಿಯರಿಗೆ ತಲಾ ರೂ. 10 ಮೊತ್ತ ನಿಗದಿಗೊಳಿಸಲಾಗಿದೆ. ಅಲ್ಲದೆ ಆರು ವರ್ಷದೊಳಗಿನವರಿಗೆ ಮುಕ್ತ ಅವಕಾಶವಿದ್ದು, ಮೇಲ್ಪಟ್ಟ ಮಕ್ಕಳಿಗೆ 5 ರೂ. ಶುಲ್ಕ ಕಲ್ಪಿಸಲಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿ ರೇಖಾ ಅವರನ್ನು ಸಂಪರ್ಕಿಸಿದಾಗ, ನಿನ್ನೆಯಿಂದ ಸರಕಾರದ ನಿರ್ದೇಶನ ಜಾರಿಗೆ ಬಂದಿರುವುದಾಗಿ ಮಾಹಿತಿ ನೀಡಿದರು. ಅಲ್ಲದೆ, ರಾಜ್ಯ ಸರಕಾರವು ನಿಗಧಿಗೊಳಿಸಿರುವಂತೆ ಶುಲ್ಕ ವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರವಾಸಿಗರ ಆಗಮನ : ಭಾನುವಾರವಾದ ನಿನ್ನೆ 250ಕ್ಕೂ ಅಧಿಕ ಪ್ರವಾಸಿಗರು ಮ್ಯೂಸಿಯಂ ಸಂದರ್ಶನ ಮಾಡಿದ್ದಾರೆ. ಅಲ್ಲದೆ ಸರಕಾರದ ಮಾರ್ಗಸೂಚಿಯಂತೆ ಕೊರೊನಾ ಮುಂಜಾಗ್ರತಾ ಕ್ರಮದೊಂದಿಗೆ, ಸರದಿಯಲ್ಲಿ ಆಗಮಿಸಿ ಶುಲ್ಕ ಪಾವತಿಸಿ ಮ್ಯೂಸಿಯಂನಲ್ಲಿ ಪರಿವೀಕ್ಷಣೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿದರು.