ಬೆಂಗಳೂರು, ನ. 23: ಕೊರೊನಾ ಸೋಂಕು ಹಿನ್ನೆಲೆ ಮತ್ತು ಚಳಿಗಾಲ ಹೆಚ್ಚಾಗಿ ಇರುವುದರಿಂದ ಕರ್ನಾಟಕ ರಾಜ್ಯದಲ್ಲಿ ಪ್ರಸಕ್ತ ವರ್ಷದ ಡಿಸೆಂಬರ್ ಅಂತ್ಯದವರೆಗೆ ಯಾವುದೇ ಶಾಲೆಗಳನ್ನು ಹಾಗೂ ಪದವಿಪೂರ್ವ ಕಾಲೇಜುಗಳನ್ನು ಆರಂಭ ಮಾಡುವುದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಅವರು ಮಾಹಿತಿ ನೀಡಿದರು.ರಾಜ್ಯದಲ್ಲಿ ಒಂದನೇ ತರಗತಿಯಿಂದ ಪಿಯುಸಿವರೆಗೆ ಡಿಸೆಂಬರ್ ಅಂತ್ಯದವರೆಗೆ ಯಾವುದೇ ಶಾಲೆಗಳಲ್ಲಿ ಕ್ಲಾಸ್ ಆರಂಭ ಇಲ್ಲ. ಶಿಕ್ಷಣ ತಜ್ಞರ ವರದಿ ಆಧಾರವಾಗಿ ಇಟ್ಟುಕೊಂಡು ಶಿಕ್ಷಣ ಇಲಾಖೆ ಈ ನಿರ್ಧಾರ ತಳೆದಿದೆ ಎಂದು ಸಚಿವರು ತಿಳಿಸಿದ್ದಾರೆ.ಡಿಸೆಂಬರ್ ಅಂತ್ಯದಲ್ಲಿ ಮತ್ತೆ ಸಭೆ ಸೇರಿ ಮುಂದಿನ ನಿರ್ಧಾರವನ್ನು ಪ್ರಕಟಿಸಲಾಗುವುದು. ಡಿಸೆಂಬರ್ ಅಂತ್ಯದವರೆಗೂ ರಾಜ್ಯದಲ್ಲಿ ವಿದ್ಯಾರ್ಥಿಗಳು ಆನ್‍ಲೈನ್ ಮತ್ತು ದೂರದರ್ಶನ ಹಾಗೂ ರೇಡಿಯೋ ಮೂಲಕ ವಿದ್ಯಾಭ್ಯಾಸ ಮುಂದುವರೆಸುವುದು ಅನಿವಾರ್ಯ ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.ರಾಜ್ಯದಲ್ಲಿ ಪ್ರಾರ್ಥಮಿಕ, ಪ್ರೌಢ ಮತ್ತು ಪಿಯು ತರಗತಿಗಳು ಡಿಸೆಂಬರ್ ಅಂತ್ಯದವರೆಗೂ ತೆರೆಯುವುದಿಲ್ಲ. ಹತ್ತನೇ ತರಗತಿಯ 9.50 ಲಕ್ಷ ವಿದ್ಯಾರ್ಥಿಗಳು ಇದ್ದಾರೆ. ದ್ವಿತೀಯ ಪಿಯುಸಿ ವಿಭಾಗದಲ್ಲಿ 5.70 ಲಕ್ಷ ವಿದ್ಯಾರ್ಥಿಗಳು ಇದ್ದಾರೆ ಎಂದು ಸಚಿವರು ಅಂಕಿಅಂಶ ನೀಡಿದ್ದಾರೆ.
ಪರೀಕ್ಷೆ ಬಗ್ಗೆ ಸದ್ಯದಲ್ಲೇ ದಿನಾಂಕ ಘೋಷಿಸುತ್ತೇವೆ. ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳು ನಿಗದಿತ ದಿನಾಂಕದಲ್ಲಿ ನಡೆಯುತ್ತದೆ. ಯಾವುದೇ ಗೊಂದಲ ಬೇಡ ಎಂದು ಸಚಿವರು ಹೇಳಿಕೆ ನೀಡಿದ್ದಾರೆ.
ಶಿಕ್ಷಣ ತಜ್ಞರಾದ ಡಾ. ಸುದರ್ಶನ್ ಸೇರಿದಂತೆ ಇತರ ಪ್ರಮುಖರು ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಸೇರಿದಂತೆ ಪ್ರತಿಯೊಬ್ಬರ ಸಲಹೆ ಪಡೆದು ಸರಕಾರ ಈ ನಿರ್ಧಾರ ಕೈಗೊಂಡಿರುವುದಾಗಿ, ಆ ಬಳಿಕ ಶಿಕ್ಷಣ ಸಚಿವರು ತಿಳಿಸಿದ್ದಾರೆ.