ಭಾರತಕ್ಕೆ ಸಮನ್ಸ್ ನೀಡಿದ ಪಾಕಿಸ್ತಾನ

ಇಸ್ಲಾಮಾಬಾದ್, ನ.23 : ಗಡಿ ನಿಯಂತ್ರಣ ರೇಖೆ(ಎಲ್‍ಒಸಿ)ಯಲ್ಲಿ ಭಾರತೀಯ ಸೇನೆ ಕದನ ವಿರಾಮ ಉಲ್ಲಂಘಿಸಿದೆ ಎಂದು ಆರೋಪಿಸಿ ಭಾರತೀಯ ಹಿರಿಯ ರಾಜತಾಂತ್ರಿಕ ಅಧಿಕಾರಿಗೆ ಪಾಕಿಸ್ತಾನ ಸಮನ್ಸ್ ನೀಡಿದೆ. ವಿದೇಶಾಂಗ ಕಚೇರಿ(ಎಫ್‍ಒ) ಪ್ರಕಾರ, ಎಲ್‍ಒಸಿಯ ಖುಯಿರಟ್ಟಾ ಸೆಕ್ಟರ್‍ನಲ್ಲಿ ಭಾನುವಾರ ನಡೆದ ಭಾರತೀಯ ಸೇನೆಯ ಯೋಧರು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಿಂದಾಗಿ 11 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ಆರೋಪಿಸಿದೆ. ಈ ವರ್ಷ ಭಾರತವು 2,820 ಕದನ ವಿರಾಮ ಉಲ್ಲಂಘನೆ ಮಾಡಿದೆ ಎಂದು ವಿದೇಶಾಂಗ ಕಚೇರಿ ಆರೋಪಿಸಿದೆ.

ಉಗ್ರರಿಗೆ ಪಾಕಿಸ್ತಾನವೇ ಸಹಾಯ ಮಾಡಿದೆ

ನವದೆಹಲಿ, ನ.23 : ಪಾಕಿಸ್ತಾನ ಭಾರತಕ್ಕೆ ಉಗ್ರರನ್ನು ರವಾನಿಸುವ ತನ್ನ ಚಾಳಿಯನ್ನು ಎಂದಿನಿಂತೆ ಮುಂದುವರೆಸಿದೆ. ಭಾರತದೊಳಗೆ ನುಸುಳಲು ಉಗ್ರರಿಗೆ ಪಾಕಿಸ್ತಾನವೇ ಸಹಾಯ ಮಾಡಿದೆ ಎಂಬುದಕ್ಕೆ ಸಾಕ್ಷ್ಯ ದೊರೆತಿದೆ. ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸಲು ಪಾಕಿಸ್ತಾನ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಇತ್ತೀಚೆಗಷ್ಟೇ ಹತ್ಯೆಯಾದ ನಾಲ್ವರು ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಭಯೋತ್ಪಾದಕರು ಭಾರತಕ್ಕೆ ನುಸುಳಲು ಬಳಿಸಿದ್ದ ಸುರಂಗವನ್ನು ಭಾರತೀಯ ಸೇನಾಪಡೆಗಳು ಪತ್ತೆ ಹಚ್ಚಿದೆ. ಅಂತರಾಷ್ಟ್ರೀಯ ಗಡಿಗೆ ಹೊಂದಿಕೊಂಡಿರುವ ಕಾಶ್ಮೀರದ ಸಾಂಬಾ ವಲಯದಲ್ಲಿ ಮೂರು ದಿನಗಳ ಶೋಧ ಕಾರ್ಯಾಚರಣೆ ನಡೆಸಿದ ಬಳಿಕ 150 ಮೀಟರ್ ಉದ್ದದ ಈ ಸುರಂಗ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪಾಕಿಸ್ತಾನದ ಗಡಿಯಲ್ಲಿ ಭಾರೀ ಬಂದೋಬಸ್ತ್ ನಿಯೋಜಿಸುವ ಕಾರಣ ಇಷ್ಟು ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಪಾಕಿಸ್ತಾನ ಬೆಂಬಲಿತ ಉಗ್ರರು ಭಾರತದ ಗಡಿ ನುಸುಳಲು ಸಾಧ್ಯವೇ ಇಲ್ಲ. ಹೀಗಾಗಿ ಪಾಕಿಸ್ತಾನ ಉಗ್ರರು ಗುಪ್ತ ಸುರಂಗವೊಂದರ ಮೂಲಕ ಭಾರತ ಪ್ರವೇಶಿಸಿರಬಹುದು ಎಂದು ಗುಪ್ತಚರ ಇಲಾಖೆ ಹೇಳಿತ್ತು.

ಗುಂಡಿನ ಕಾಳಗ : ಮೂವರು ನಕ್ಸಲರ ಹತ್ಯೆ

ರಾಯ್‍ಪುರ, ನ.23 : ರಾಯ್‍ಪುರದಿಂದ ದಕ್ಷಿಣಕ್ಕೆ 200 ಕಿ.ಮೀ ದೂರದಲ್ಲಿರುವ ಕಂಕರ್ ಜಿಲ್ಲೆಯ ತಡೋಕಿಯಲ್ಲಿ ಭದ್ರತಾ ಪಡೆಗಳೊಂದಿಗೆ ಸೋಮವಾರ ನಡೆದ ಗುಂಡಿನ ಕಾಳಗದಲ್ಲಿ ನಿಷೇಧಿತ ಸಿಪಿಐ (ಮಾವೋವಾದಿ) ಮಹಿಳಾ ಹೋರಾಟಗಾರ್ತಿ ಸೇರಿದಂತೆ ಮೂವರು ನಕ್ಸಲರನ್ನು ಹತ್ಯೆ ಮಾಡಲಾಗಿದೆ. ಜಿಲ್ಲೆಯಲ್ಲಿ ರೌಘಾಟ್ ಕಬ್ಬಿಣದ ಅದಿರು ಯೋಜನೆಗಾಗಿ ನಡೆಯುತ್ತಿರುವ ರೈಲ್ವೆ ಮಾರ್ಗದ ಕಾಮಗಾರಿಗೆ ಭದ್ರತೆ ನೀಡುತ್ತಿದ್ದ ಸಶಸ್ತ್ರ ಸೀಮಾ ಬಲ (ಎಸ್‍ಎಸ್‍ಬಿ) ಜವಾನರು ಎಂದಿನಂತೆ ಗಸ್ತು ತಿರುಗುತ್ತಿದ್ದರು. ಈ ವೇಳೆ ನಕ್ಸಲರು ಭದ್ರತಾ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪ್ರತಿ ದಾಳಿ ನಡೆಸಿದ ಎಸ್‍ಎಸ್ ಬಿ ಜವಾನರು, ಮೂವರು ಮಾವೋವಾದಿಗಳನ್ನು ಹತ್ಯೆ ಮಾಡಿದ್ದಾರೆ. ಎನ್ಕೌಂಟರ್ ಸ್ಥಳದಿಂದ ಮಹಿಳಾ ಮಾವೋವಾದಿ ಸೇರಿದಂತೆ ಮೂವರು ದಂಗೆಕೋರರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಶವಗಳನ್ನು ಗುರುತಿಸುವ ಪ್ರಯತ್ನ ನಡೆಯುದೆ ಎಂದು ಪೆÇಲೀಸ್ ಇನ್ಸ್‍ಪೆಕ್ಟರ್ ಜನರಲ್ (ಬಸ್ತರ್ ವಲಯ) ಸುಂದರರಾಜ್ ಪಿ ಅವರು ತಿಳಿಸಿದ್ದಾರೆ. ಗುಂಡಿನ ಕಾಳಗದಲ್ಲಿ ಒಬ್ಬ ಎಸ್‍ಎಸ್‍ಬಿ ಹೆಡ್ ಕಾನ್‍ಸ್ಟೆಬಲ್ ಅಮನ್ ಕುಮಾರ್ ಅವರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಹೊರಬಂದಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ 500 ಕೋಟಿ

ಬೆಂಗಳೂರು, ನ.23 : ರಾಜ್ಯದಲ್ಲಿ ವೀರಶೈವ ಲಿಂಗಾಯತ ಜನಾಂಗದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮಗ್ರ ಅಭಿವೃದ್ದಿಗಾಗಿ ನಿಗಮ ಸ್ಥಾಪಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಆರಂಭಿಕವಾಗಿ 500 ಕೋಟಿ ರೂ. ಅನುದಾನ ಒದಗಿಸಿ ಆದೇಶ ಹೊರಡಿಸಿದೆ. ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮವನ್ನು ಕಂಪನಿ ಕಾಯ್ದೆ 2013ರ ಸೆಕ್ಷನ್ 7 ಅನ್ವಯ ನೊಂದಾಯಿಸಿ ಸ್ಥಾಪಿಸಲು ಆದೇಶಿಸಲಾಗಿದೆ.

ವನ್ಯ ಜೀವಿ ಸಂಪತ್ತಿನಲ್ಲಿ ಕರ್ನಾಟಕ ಅಗ್ರ

ಬೆಂಗಳೂರು, ನ.23 : ವನ್ಯ ಜೀವಿ ಸಂಪತ್ತಿನಲ್ಲಿ ಕರ್ನಾಟಕ ರಾಜ್ಯ ಅಗ್ರ ಸ್ಥಾನದಲ್ಲಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಜೈವಿಕ ಸಂಪತ್ತನ್ನು ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯವಾಗಿದೆ ಎಲ್ಲ ಒತ್ತಡಗಳನ್ನು ಮೀರಿ ಅರಣ್ಯ ಸಂಪತ್ತು ರಕ್ಷಣೆ ಮಾಡುವಲ್ಲಿ ಅರಣ್ಯ ಸಿಬ್ಬಂದಿಗಳ ಕೆಲಸ ಮೆಚ್ಚುವಂತಹದ್ದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅರಣ್ಯ ಇಲಾಖೆ ಸಿಬ್ಬಂದಿ ಅಧಿಕಾರಿಗಳಿಗೆ ಪದಕ ಪ್ರದಾನ ಮಾಡಿ ಅವರು ಮಾತನಾಡಿದರು. ಜಗತ್ತು ಒಂದಕ್ಕೊಂದು ಬೆಸೆದುಕೊಂಡಿರುವ ಬಲೆ ಎಂಬ ಪೂರ್ಣಚಂದ್ರ ತೇಜಸ್ವಿಯವರ ಸಾಲುಗಳನ್ನು ಸ್ಮರಿಸಿ, ರಾಜ್ಯ ಅರಣ್ಯ ಮತ್ತು ಜೀವ ಸಂಪತ್ತನ್ನು ಉಳಿಸುವಲ್ಲಿ ಮೊದಲ ಸ್ಥಾನದಲ್ಲಿ ಇದೆ.ವನ್ಯ ಜೀವಿ ಸಂಪತ್ತಿನಲ್ಲಿ ರಾಜ್ಯ ಅಗ್ರಸ್ಥಾನದಲ್ಲಿದೆ ಎಂದು ಹೇಳಿದರು. ಹುಲಿ ಮತ್ತು ಆನೆ ಗಳ ಸಂಖ್ಯೆಯಲ್ಲಿ ದೇಶದಲ್ಲಿ ಎಂಟನೇ ಸ್ಥಾನದಲ್ಲಿದೆ. ಎಲ್ಲ ಒತ್ತಡಗಳನ್ನು ಮೀರಿ ಅರಣ್ಯ ಸಂಪತ್ತು ರಕ್ಷಣೆ ಮಾಡುವಲ್ಲಿ ಅರಣ್ಯ ಇಲಾಖಾ ಸಿಬ್ಬಂದಿಗಳ ಕಾರ್ಯ ಮೆಚ್ಚುವಂತಹದ್ದು.ಈ ಸಿಬ್ಬಂದಿಗಳ ಕರ್ತವ್ಯ ದಿಂದ ಅರಣ್ಯ ಸಂಪತ್ತು ರಕ್ಷಣೆಯಲ್ಲಿದೆ ಎಂದರು.

ಐಎಂಎ ವಂಚನೆ : ಬಿಡಿಎ ಅಧಿಕಾರಿ ವಶ

ಬೆಂಗಳೂರು ನ.23 : ಐಎಂಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಸಿಬಿಐ ಅಧಿಕಾರಿಗಳು ಸೋಮವಾರ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬಿಡಿಎ ವಿಶೇಷ ಭೂಸ್ವಾಧೀನಾಧಿಕಾರಿ ಪಿ.ಡಿ.ಕುಮಾರ್ ಬಂಧಿತ ಆರೋಪಿಯಾಗಿದ್ದು, ಈತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಮೊಹಮ್ಮದ್ ಮನ್ಸೂರ್ ಖಾನ್ ಹಣ ರಿಯಲ್ ಎಸ್ಟೇಟ್ ವಲಯದಲ್ಲಿ ಹೂಡಿಕೆಯಾಗಿದೆ. ಮನ್ಸೂರ್ ಖಾನ್‍ನಿಂದ 3 ರಿಂದ 4 ಕೋಟಿ ರೂ. ಹಣವನ್ನು ಪಿ.ಡಿ. ಕುಮಾರ್ ಪಡೆದಿದ್ದರು ಎಂದು ಆರೋಪಿಸಿ ಕುಮಾರ್ ವಿರುದ್ಧ ಸಿಬಿಐ ಅಧಿಕಾರಿಗಳು ಎಫ್ ಐಆರ್ ದಾಖಲಿಸಿದ್ದರು. ಪಿಡಿ ಕುಮಾರ್ ಅವರನ್ನು ಬಂಧಿಸಿದ ಅಧಿಕಾರಿಗಳು, ಸಿಬಿಐ ವಿಶೇಷ ನ್ಯಾಯಾಲಯದ ಎದುರು ಹಾಜರುಪಡಿಸಿದ್ದರು. ನಂತರ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗಾಗಿ ಕುಮಾರ್ ಅವರನ್ನು ಮೂರು ದಿನಗಳ ಕಾಲ ಸಿಬಿಐ ವಶಕ್ಕೆ ನೀಡಿ ಆದೇಶಿಸಿದೆ.

“ಹಿಂದೂಸ್ತಾನ್” ಬೇಡ, ಭಾರತ್ ಇರಲಿ

ಪಾಟ್ನಾ, ನ.23 : ಉರ್ದು ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವಾಗ ಅದರ ಕರಡಿನಲ್ಲಿರುವ “ಹಿಂದೂಸ್ತಾನ್” ಪದವನ್ನು ಸಂವಿಧಾನದಲ್ಲಿರುವಂತೆ “ಭಾರತ್” ಎಂದು ಬದಲಾಯಿಸಬೇಕೆಂದು ಎಐಎಂಐಎಂ ಶಾಸಕರೊಬ್ಬರು, ಒತ್ತಾಯಿಸಿದ್ದರಿಂದ ಬಿಹಾರ ವಿಧಾಸಭೆಯಲ್ಲಿ ವಿವಾದವೊಂದು ತಲೆದೋರಿತು. ಎಐಐಎಂಐಎಂನ ರಾಜ್ಯ ಅಧ್ಯಕ್ಷ ಅಖ್ತರುಲ್ ಇಮಾನ್ ಉರ್ದು ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಈ ಬೇಡಿಕೆ ಸಲ್ಲಿಸಿದರು. ಹಂಗಾಮಿ ಸ್ಪೀಕರ್ ಜಿತನ್ ರಾಮ್ ಮಾಂಝಿ, ಸಭೆಯ ಪ್ರಕಾರ ಉರ್ದುವಿನಲ್ಲಿ ಪ್ರಮಾಣವಚನ ಸ್ವೀಕರಿಸುವವರ ಹಿಂದೂಸ್ತಾನ್ ಪದ ಹೇಳಬಹುದು ಎಂದರು. ಆದಾಗ್ಯೂ, ಭಾರತ್ ಪದ ಬಳಕೆಗೂ ಅವಕಾಶ ನೀಡಲಾಯಿತು. ನಂತರ ಪ್ರತಿಕ್ರಿಯಿಸಿದ ಶಾಸಕ, ನಾನು ಯಾವುದೇ ಆಕ್ಷೇಪಣೆಗಳನ್ನು ಎತ್ತಿಲ್ಲ. ಸಂವಿಧಾನದ ಮುನ್ನುಡಿಯನ್ನು ಓದಿದಾಗಲೆಲ್ಲಾ, ಅದು ಭಾರತ್ ಪದವನ್ನು ಉಲ್ಲೇಖಿಸುತ್ತದೆಂದು ಸರಳವಾಗಿ ಹೇಳಿದ್ದೇನೆ. ಇದರ ಹಿನ್ನೆಲೆಯಲ್ಲಿ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವಾಗ, ನಮ್ಮ ದೇಶದ ಹೆಸರನ್ನು ಬಳಸುವುದು ಸೂಕ್ತವಾಗಿರುತ್ತದೆ ಎಂದರು.