ವೀರಾಜಪೇಟೆ, ನ. 22: ಅಧ್ಯಕ್ಷ ಉಪಾಧ್ಯಕ್ಷ ಪದವಿಗಳ ಮೀಸಲಾತಿ ರಾಜ್ಯ ಉಚ್ಚ ನ್ಯಾಯಾಲಯ ರದ್ದುಪಡಿಸಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ವೀರಾಜಪೇಟೆ ಪಟ್ಟಣ ಪಂಚಾಯಿತಿಯು ತಾ. 26 ರಂದು ನಿಗದಿಪಡಿಸಿದ್ದ ಪ್ರಥಮ ಸಭೆಯನ್ನು ರದ್ದುಪಡಿಸಲಾಗಿದೆ.

ತಾ. 26ರಂದು ಬೆಳಿಗ್ಗೆ 11 ಗಂಟೆಗೆ ಚುನಾಯಿತ ಅಧ್ಯಕ್ಷ ಉಪಾಧ್ಯಕ್ಷರ ಸಮ್ಮುಖದಲ್ಲಿ ಪಟ್ಟಣ ಪಂಚಾಯಿತಿಯ ಆಡಳಿತ ಮಂಡಳಿಯ ಸಭೆ ನಡೆಯಲಿದೆ ಎಂದು ಪಟ್ಟಣ ಪಂಚಾಯಿತಿಯ ಅಧಿಕಾರಿಗಳು 18 ಮಂದಿ ಚುನಾಯಿತ ಸದಸ್ಯರುಗಳು ಹಾಗೂ 3 ಮಂದಿ ನಾಮ ನಿರ್ದೇಶಿತ ಸದಸ್ಯರುಗಳಿಗೆ ಮೀಟಿಂಗ್ ನೋಟೀಸ್ ಇಂದು ಜಾರಿ ಮಾಡಲು ಮುಖ್ಯಾಧಿಕಾರಿ ತೀರ್ಮಾನಿಸಿದ್ದರು.

ತಾ. 3 ರಂದು ಅಧ್ಯಕ್ಷ-ಉಪಾಧ್ಯಕ್ಷ ಪದವಿಗಳಿಗೆ ಚುನಾವಣೆ ನಡೆದ ನಂತರ ಟಿ.ಆರ್. ಸುಶ್ಮಿತಾ ಅವಿರೋಧವಾಗಿ ಅಧ್ಯಕ್ಷೆಯಾಗಿ, ಉಪಾಧ್ಯಕ್ಷರಾಗಿ ಕೆ.ಬಿ. ಹರ್ಷವರ್ಧನ್ ಲಾಟರಿ ಮೂಲಕ ಆಯ್ಕೆಯಾಗಿದ್ದು ಅಂದೇ ಅಧಿಕಾರ ವಹಿಸಿಕೊಂಡ ಇಬ್ಬರು ತಾ. 4 ರಿಂದ ಅಧ್ಯಕ್ಷ-ಉಪಾಧ್ಯಕ್ಷರ ಛೇಂಬರ್‍ನಲ್ಲಿ ನಿತ್ಯವೂ ಆಸೀನರಾಗುತ್ತಿದ್ದರು. ಇಂದು ನ್ಯಾಯಾಲಯದ ಮೀಸಲಾತಿ ರದ್ದು ಆದೇಶದಿಂದ ಇಬ್ಬರು ಪಟ್ಟಣ ಪಂಚಾಯಿತಿಗೆ ಆಗಮಿಸಿದ್ದರೂ ಅವರ ಛೇಂಬರ್‍ನಲ್ಲಿ ಗೈರು ಹಾಜರಾಗಿದ್ದರು.

ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಹದಿನೆಂಟು ವಾರ್ಡ್‍ಗಳಿಗೆ ಚುನಾವಣೆ ನಡೆದು ಎರಡು ವರ್ಷಗಳಾಗಿತ್ತು. ನ್ಯಾಯಾಲಯದಲ್ಲಿದ್ದ ಅಧ್ಯಕ್ಷ-ಉಪಾಧ್ಯಕ್ಷರ ವಿವಾದದ ತಡೆಯಾಜ್ಞೆ ತೆರವುಗೊಂಡ ಹಿನ್ನೆಲೆ ಪಟ್ಟಣ ಪಂಚಾಯಿತಿಯ ಎರಡು ಪದವಿಗಳಿಗೂ ತಾ. 3.11.20 ರಂದು ಚುನಾವಣೆ ನಡೆಸಲಾಗಿತ್ತು. ಪಟ್ಟಣ ಪಂಚಾಯಿತಿಯ ನೂತನ ಆಡಳಿತ ಮಂಡಳಿಯ ಎಲ್ಲ ಸದಸ್ಯರುಗಳು ಪ್ರಥಮ ಸಭೆ ಹೇಗೆ ನಡೆಯಬಹುದೆಂದು ನಿರೀಕ್ಷಿಸುತ್ತಿರುವಾಗಲೇ ನ್ಯಾಯಾಲಯದ ಮೀಸಲಾತಿಯ ಆದೇಶ ಸದಸ್ಯರುಗಳಿಗೆ ನಿರಾಶೆ ತಂದಿದೆ.