ಶಾಲೆಗಳ ಪುನರಾರಂಭ : ಇಂದು ಸಭೆ

ಬೆಂಗಳೂರು, ನ. 22: ರಾಜ್ಯದಲ್ಲಿ ಶಾಲೆಗಳ ಪುನರಾರಂಭ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ತಾ. 23 ರಂದು (ಇಂದು) ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಶಾಲೆಗಳ ಆರಂಭದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಕೋವಿಡ್ ಪರಿಸ್ಥಿತಿಯಲ್ಲಿ ಶಾಲೆಗಳನ್ನು ಪುನರಾರಂಭಿಸುವ ಸಂಬಂಧ ಶಿಕ್ಷಣ ಇಲಾಖೆ ವರದಿಯೊಂದನ್ನು ಸಿದ್ಧಪಡಿಸಿದ್ದು, ಈ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿ ನಂತರ ಈ ವರದಿಯ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಲಾಗುತ್ತದೆ. ಈ ವರದಿ ಶಾಲೆಗಳ ಪುನರಾರಂಭದ ಬಗ್ಗೆ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು, ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಣ ಇಲಾಖೆಯ ಆಯುಕ್ತರ ಅಭಿಪ್ರಾಯಗಳನ್ನು ಒಳಗೊಂಡಿದೆ. ನಾಳಿನ ಸಭೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್‍ಕುಮಾರ್, ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳು ಪಾಲ್ಗೊಳ್ಳಲಿದ್ದು, ಶಾಲೆಗಳ ಆರಂಭದ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ತೀರ್ಮಾನಗಳನ್ನು ಕೈಗೊಳ್ಳಲಿದ್ದಾರೆ. ರಾಜ್ಯದಲ್ಲಿ ಡಿಸೆಂಬರ್‍ನಲ್ಲಿ ಶಾಲೆಗಳನ್ನು ಪುನರಾರಂಭಿಸಲಾಗುವುದು ಎಂಬ ಮಾತುಗಳು ಕೇಳಿಬರುತ್ತಿವೆಯಾದರೂ ಆತುರದ ನಿರ್ಧಾರಗಳನ್ನು ಕೈಗೊಳ್ಳುವುದಿಲ್ಲ ಎಂದು ಸಚಿವ ಸುರೇಶ್‍ಕುಮಾರ್ ಈಗಾಗಲೇ ಹೇಳಿದ್ದಾರೆ. ಎಲ್ಲವನ್ನು ಸಮಗ್ರವಾಗಿ ಚರ್ಚಿಸಿದ ನಂತರವೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದು, ನಾಳಿನ ಸಭೆಯಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ವಿಂದ್ಯಾಚಲ ನಿರ್ಲಕ್ಷ್ಯ ಹೊಂದಿದ ಕ್ಷೇತ್ರ

ಉತ್ತರಪ್ರದೇಶ, ನ. 22: ಸ್ವಾತಂತ್ರ್ಯ ನಂತರ ದಶಕಗಳ ಕಾಲ ನಿರ್ಲಕ್ಷ್ಯ ಹೊಂದಿದ ಯಾವುದಾದರೂ ಕ್ಷೇತ್ರವಿದ್ದರೆ ಅದು ಕುಡಿಯುವ ನೀರಿನ ಸೌಲಭ್ಯ ಯೋಜನೆ. ವಿಂದ್ಯಾಚಲ ಅಥವಾ ಬುಂದೇಲ್ ಖಂಡ್‍ಗಳಲ್ಲಿ ಸಾಕಷ್ಟು ಸಂಪನ್ಮೂಲಗಳಿದ್ದರೂ ಕೂಡ ಕೊರತೆಯ ಪ್ರದೇಶಗಳಾಗಿ ಈ ಪ್ರದೇಶಗಳು ಕಂಡವು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಲ್ಲೆಲ್ಲ ಸಾಕಷ್ಟು ನದಿಗಳು, ಹಳ್ಳ-ಕೊಳ್ಳಗಳಿದ್ದರೂ ಕೂಡ ಹಲವು ಪ್ರದೇಶಗಳು ಬರಡಾಗಿ ಮತ್ತು ಬರಗಾಲಪೀಡಿತ ಪ್ರದೇಶಗಳಾಗಿ ಕಂಡವು. ಹೀಗಾಗಿ ಇಲ್ಲಿಂದ ಹಲವು ಜನರು ಬೇರೆ ಕಡೆಗೆ ಉದ್ಯೋಗ, ಜೀವ ನೋಪಾಯಕ್ಕಾಗಿ ವಲಸೆ ಹೋಗಬೇಕಾಗಿ ಬಂತು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಉತ್ತರ ಪ್ರದೇಶದ ಮಿರ್ಜಾಪುರ ಮತ್ತು ಸೊನಭದ್ರ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಪ್ರತಿ ಮನೆಗೆ ನೀರಿನ ಯೋಜನೆ ಜಾರಿಗೆ ಬಂದು ಒಂದು ವರ್ಷ ಕಳೆದಿದೆ. ಇದುವರೆಗೆ 2.60 ಕೋಟಿಗೂ ಹೆಚ್ಚು ಮಂದಿಗೆ ಕುಡಿಯುವ ನೀರನ್ನು ನಳ್ಳಿಗಳ ಮೂಲಕ ಅವರ ಮನೆಗಳಿಗೆ ಒದಗಿಸಲಾಗಿದೆ. ಇಂದು ಆರಂಭಗೊಂಡ ಯೋಜನೆ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ ಎಂದು ಪ್ರಧಾನ ಮಂತ್ರಿ ಹೇಳಿದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡಿ, ವಿಂಧ್ಯ ಪ್ರದೇಶದಲ್ಲಿ ಕಳೆದ 70 ವರ್ಷಗಳಲ್ಲಿ ಕುಡಿಯುವ ನೀರನ್ನು ಕೇವಲ 398 ಗ್ರಾಮಗಳಿಗೆ ನೀಡಲಾಗಿದೆ.

ಮಾಜಿ ಶಾಸಕ ರೋಷನ್ ಸಿಬಿಐ ವಶ

ಬೆಂಗಳೂರು, ನ. 22: ಬಹುಕೋಟಿ ಐಎಂಎ ವಂಚನೆ ಪ್ರಕರಣದಲ್ಲಿ ಮಾಜಿ ಶಾಸಕ ರೋಷನ್ ಬೇಗ್ ಅವರನ್ನು ಸಿಬಿಐ ವಶಕ್ಕೆ ಪಡೆದುಕೊಂಡಿದ್ದು, ಸಂಜಯ ನಗರದಲ್ಲಿರುವ ಸಿಬಿಐ ಕಚೇರಿಯಲ್ಲಿ ವಿಚಾರಣೆ ನಡೆಸುತ್ತಿದೆ. ಐಎಂಎಯಿಂದ ಹೂಡಿಕೆದಾರರಿಗೆ ಬಹುಕೋಟಿ ವಂಚನೆ ಪ್ರಕರಣದಲ್ಲಿ ರೋಷನ್ ಬೇಗ್ ಅವರ ಹೆಸರು ಕೇಳಿಬಂದಿತ್ತು. ಐಎಂಎ ಅಧ್ಯಕ್ಷ ಮನ್ಸೂರ್ ಖಾನ್‍ನಿಂದ ನೂರಾರು ಕೋಟಿ ರೂಪಾಯಿಯನ್ನು ರೋಷನ್ ಬೇಗ್ ಪಡೆದುಕೊಂಡಿದ್ದಾರೆ ಎಂಬ ಆರೋಪವಿದೆ. ಹಣವಷ್ಟೇ ಅಲ್ಲ, ಐಷಾರಾಮಿ ಕಾರುಗಳೂ ಸೇರಿದಂತೆ ಇನ್ನಿತರ ದುಬಾರಿ ಬೆಲೆಯ ಉಡುಗೊರೆಗಳನ್ನೂ ರೋಷನ್ ಬೇಗ್ ಪಡೆದಿದ್ದಾರೆ ಎಂಬ ಆರೋಪವಿದೆ. ಈ ಪ್ರಕರಣದಲ್ಲಿ ತಮ್ಮ ಮೇಲೆ ಆರೋಪ ಬಂದ ಕೂಡಲೇ ಕಾಂಗ್ರೆಸ್ ಪಕ್ಷ ಹಾಗೂ ಶಿವಾಜಿನಗರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರೋಷನ್ ಬೇಗ್, ಬಿಜೆಪಿ ಸೇರ್ಪಡೆಯಾಗಲು ಮುಂದಾಗಿದ್ದರು. ಸಿಬಿಐ ತನಿಖೆಯಿಂದ ತಪ್ಪಿಸಿಕೊಳ್ಳುವ ಕಾರಣಕ್ಕಾಗಿಯೇ ಅವರು ಬಿಜೆಪಿ ಸೇರಲು ನಿರ್ಧರಿಸಿದ್ದಾರೆ ಎಂಬ ಆರೋಪ ಕೂಡಾ ಕೇಳಿಬಂದಿತ್ತು.

ಬಂದ್ ಹತ್ತಿಕ್ಕಲು ಸಾಧ್ಯವಿಲ್ಲ

ಬೆಂಗಳೂರು, ನ. 22: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಬಂದ್ ಅನ್ನು ಯಾವುದೇ ಕಾರಣಕ್ಕೂ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಕನ್ನಡ ಒಕ್ಕೂಟದ ಮುಖಂಡ ಮತ್ತು ಕನ್ನಡಪರ ಹೋರಾಟಗಾರ ಸಾರಾ ಗೋವಿಂದು ಹೇಳಿದ್ದಾರೆ. ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಡಿ. 5 ರಂದು ಕನ್ನಡಪರ ಸಂಘಟನೆಗಳು ಕರೆನೀಡಿರುವ ಕರ್ನಾಟಕ ಬಂದ್‍ಅನ್ನು ಯಾವುದೇ ಕಾರಣಕ್ಕೂ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಕನ್ನಡ ಒಕ್ಕೂಟದ ಮುಖಂಡ ಮತ್ತು ಕನ್ನಡಪರ ಹೋರಾಟಗಾರ ಸಾ.ರಾ. ಗೋವಿಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಾ.ರಾ. ಗೋವಿಂದ್, ಯಾವುದೇ ಕಠಿಣ ಕ್ರಮ, ಒತ್ತಡವಾದರೂ ಸರಿ ಬಂದ್ ಹತ್ತಿಕ್ಕಲು ಸಾಧ್ಯವಿಲ್ಲ. ಬಂದ್‍ಗೆ ಈಗಾಗಲೇ ಹಲವರು ಬೆಂಬಲ ವ್ಯಕ್ತಪಡಿಸಿದ್ದು, ರಾಜ್ಯದ ಜನತೆಯೂ ಬೆಂಬಲಿಸುವಂತೆ ಮನವಿ ಮಾಡಿದರು. ನಾಳೆ ಕನ್ನಡದ ಒಕ್ಕೂಟದ ವತಿಯಿಂದ ಬಳ್ಳಾರಿಯಲ್ಲಿ ಹೋರಾಟ ನಡೆಯಲಿದೆ. ಈ ಹೋರಾಟಕ್ಕೆ ಬೆಂಬಲ ನೀಡದವರು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗ ಬೇಕಾಗುತ್ತದೆ. ಆ ರೀತಿ ಆಗುವುದು ಬೇಡ. ನಾವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟಾಗಿ ಹೋರಾಡುವ ಪ್ರಯತ್ನ ಮಾಡುತ್ತೇವೆ ಎಂದರು.

ಜಾಲತಾಣದ ತಪ್ಪಿಗೆ ಜೈಲು ಶಿಕ್ಷೆ

ತಿರುವನಂತಪುರಂ, ನ. 22: ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಅಥವಾ ಬೆದರಿಕೆ ಹಾಕಿದರೆ 5 ವರ್ಷ ಜೈಲು ಶಿಕ್ಷೆ ವಿಧಿಸುವ ಸುಗ್ರೀವಾಜ್ಞೆಗೆ ಕೇರಳ ರಾಜ್ಯಪಾಲರು ಸಹಿ ಹಾಕಿದ್ದಾರೆ. ಆಡಳಿತರೂಢ ಎಲ್‍ಡಿಎಫ್ ಸರ್ಕಾರ ಕೇರಳ ಪೊಲೀಸ್ ಕಾಯ್ದೆಗೆ ಹೊಸದಾಗಿ ಸೆಕ್ಷನ್(ಎ) ಸೇರಿಸಿದೆ. ಕೋವಿಡ್-19 ಹಿನ್ನೆಲೆ ಈಗ ಅಧಿವೇಶನ ನಡೆಯುತ್ತಿಲ್ಲ. ಹೀಗಾಗಿ ಸರ್ಕಾರ ಸುಗ್ರೀವಾಜ್ಞೆಯನ್ನು ಮೂಲಕ ಕಾಯ್ದೆಯನ್ನು ಜಾರಿಗೆ ತಂದಿದ್ದು, ಶನಿವಾರ ರಾಜ್ಯಪಾಲ ಆರಿಫ್ ಮೊಹಮ್ಮದ್‍ಖಾನ್ ಸಹಿ ಹಾಕಿದ್ದಾರೆ. ಈ ಸೆಕ್ಷನ್ ಅಡಿಯಲ್ಲಿ ವ್ಯಕ್ತಿಯೊಬ್ಬ ಬೇರೊಬ್ಬ ವ್ಯಕ್ತಿಗೆ ಯಾವುದೇ ಸಂವಹನ ವಿಧಾನದ ಮೂಲಕ ನಿಂದನೆ ಅಥವಾ ಬೆದರಿಕೆ ಹಾಕಿದರೆ ಐದು ವರ್ಷಗಳ ಜೈಲು ಶಿಕ್ಷೆ ಅಥವಾ ರೂ. 10 ಸಾವಿರ ದಂಡ ಅಥವಾ ಎರಡನ್ನೂ ವಿಧಿಸಲು ಕಾಯ್ದೆ ಅವಕಾಶ ನೀಡುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಉದ್ದೇಶಪೂರ್ವವಾಗಿ ವ್ಯಕ್ತಿಗಳ ನಿಂದನೆಯಾಗುತ್ತಿರುವ ಹಿನ್ನೆಲೆ ಇವುಗಳಿಗೆ ಕಡಿವಾಣ ಹಾಕಲು ಈ ಕಾಯ್ದೆಯ ಅಗತ್ಯವಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಮರ್ಥಿಸಿಕೊಂಡಿದ್ದಾರೆ.

17 ವರ್ಷಗಳಲ್ಲಿಯೇ ಕನಿಷ್ಟ ತಾಪಮಾನ

ನವದೆಹಲಿ, ನ. 22: ತೀವ್ರ ಚಳಿಗೆ ರಾಷ್ಟ್ರ ರಾಜಧಾನಿ ದೆಹಲಿ ಜನತೆ ತತ್ತರಿಸಿ ಹೋಗಿದ್ದು, ಇಂದು ದೆಹಲಿಯಲ್ಲಿ ಕಳೆದ 17 ವರ್ಷಗಳಲ್ಲಿಯೇ ಕನಿಷ್ಟ ತಾಪಮಾನ ದಾಖಲಾಗಿದೆ. ಈ ಬಗ್ಗೆ ಕೇಂದ್ರ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ದೆಹಲಿಯಲ್ಲಿ ಭಾನುವಾರ ಮುಂಜಾನೆ ಕನಿಷ್ಟ ತಾಪಮಾನ 6.9 ಡಿಗ್ರಿ ಸೆಲ್ಸಿಯಸ್‍ಗೆ ಕುಸಿದಿದ್ದು, ಇದು 2003ರ ಬಳಿಕ ನವೆಂಬರ್ ತಿಂಗಳಲ್ಲಿ ದಾಖಲಾದ ಅತಿ ಕನಿಷ್ಟ ತಾಪಮಾನವಾಗಿದೆ ಎಂದು ಹೇಳಿದೆ. ದೆಹಲಿಯಲ್ಲಿ ಕಳೆದ ಶುಕ್ರವಾರ 7.5 ಡಿಗ್ರಿ ಸೆಲ್ಸಿಯಸ್ ಕನಿಷ್ಟ ತಾಪಮಾನ ದಾಖಲಾಗಿತ್ತು. ಅದು 14 ವರ್ಷಗಳಲ್ಲಿ ನವೆಂಬರ್ ತಿಂಗಳಲ್ಲಿ ದಾಖಲಾದ ಅತಿ ಕನಿಷ್ಟ ಉಷ್ಣಾಂಶ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿತ್ತು. ಆದರೆ ಇಂದು ಅದಕ್ಕಿಂತಲೂ ಕನಿಷ್ಟ ತಾಪಮಾನ ದಾಖಲಾಗಿದೆ. ಇನ್ನು ಸಫ್ದರ್ಜಂಗ್ ವೀಕ್ಷಣಾಲಯದ ಪ್ರಕಾರ ದೆಹಲಿಯಲ್ಲಿ ಭಾನುವಾರ ಕನಿಷ್ಟ ಉಷ್ಣಾಂಶ 6.9 ಡಿಗ್ರಿ ಸೆಲ್ಸಿಯಸ್‍ದಾಖಲಾಗಿದೆ. 2003ರ ನವೆಂಬರ್‍ನಲ್ಲಿ 6.1 ಡಿಗ್ರಿ ಸೆಲ್ಸಿಯಸ್ ಕನಿಷ್ಟ ತಾಪಮಾನ ದಾಖಲಾಗಿತ್ತು ಎಂದು ಐಎಂಡಿಯ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ಮಾಹಿತಿ ನೀಡಿದ್ದಾರೆ.