ಸುಂಟಿಕೊಪ್ಪ, ನ. 22: ಸುಂಟಿಕೊಪ್ಪ ಹೋಬಳಿ 7ನೇ ಹೊಸಕೋಟೆ, ಕಂಬಿಬಾಣೆ, ಅತ್ತೂರು ನಲ್ಲೂರು ಗ್ರಾಮದ ಪೌತಿ ವಾರಸುಖಾತೆ ಬದಲಾವಣೆ ಆಂದೋಲನವು 7ನೇ ಹೊಸಕೋಟೆ ಸರಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಈ ಆಂದೋಲನದಲ್ಲಿ 45 ಮಂದಿ ಭಾಗವಹಿಸಿದ್ದು 17 ಅರ್ಜಿಗಳನ್ನು ಸ್ವೀಕರಿಸಲಾಯಿತು. ಉಳಿದ ಮಂದಿ ಮಾಹಿತಿ ಬೇಕಾದ ದಾಖಲಾತಿಗಳನ್ನು ಕಚೇರಿಗೆ ಹಾಜರು ಪಡಿಸುವುದಾಗಿ ತಿಳಿಸಿದರು. ಉಪತಹಶೀಲ್ದಾರ್ ಶುಭಾ ಮಾತನಾಡಿ, ಸರಕಾರದ ಆದೇಶದಂತೆ ಸುಲಲಿತವಾಗಿ ಆಸ್ತಿ ಖಾತೆದಾರರ ಕುಟುಂಬ ಸದಸ್ಯರುಗಳಿಗೆ ಜಾಗದ ಪರಭಾರೆ ಮಾಡಲಾಗುವುದು. ಪೌತಿದಾರರ ಮರಣ ದೃಢೀಕರಣ ಪತ್ರ, ಆಧಾರ್ ಕಾರ್ಡ್, ಪಡಿತರಚೀಟಿ, ಮತದಾರರ ಗುರುತಿನ ಚೀಟಿಯನ್ನು ಕುಟುಂಬ ಸದಸ್ಯರು ಸಲ್ಲಿಸಬೇಕು ಎಂದೂ ಹೇಳಿದರು.
ಕಂದಾಯ ಪರೀವಿಕ್ಷಕ ಶಿವಪ್ಪ ಮಾತನಾಡಿ, ಸರಕಾರದ ಸೌಲಭ್ಯಗಳನ್ನು ಗ್ರಾಮೀಣ ಮಟ್ಟದಲ್ಲೂ ತಲುಪಿಸಬೇಕು ಅಸ್ತಿಯ ಹಕ್ಕುದಾರರು ಆದ್ದರಿಂದ ವಂಚಿತರಾಗಬಾರದೆಂದು ಪೌತಿಖಾತೆ ಬದಲಾವಣೆ ಆಂದೋಲನ ನಡೆಸಲಾಗುತ್ತಿದೆ.
ಜಮ್ಮಾ ಬಾಣೆಯ ಸರ್ವೆ ನಂಬರ್ನಲ್ಲಿ 50 ಮಂದಿ ಕುಟುಂಬ ಸದಸ್ಯರುಗಳು ಇರುತ್ತಿದ್ದರು. ಈಗ ಪ್ರತಿಯೊಬ್ಬ ಸದಸ್ಯರುಗಳಿಗೆ ಪೌತಿಖಾತೆ ಬದಲಾವಣೆಯಿಂದ ಪ್ರಯೋಜನ ಪಡೆಯಲು ಸರಕಾರ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅತ್ತೂರು-ನಲ್ಲೂರು ಕಾಫಿ ಬೆಳೆಗಾರ ಮೋಹನ್ ಮೊಣ್ಣಪ್ಪ ಅವರ ಪ್ರಶ್ನೆಗೆ ಉತ್ತರ ನೀಡಿದರು.
ಪೌತಿಖಾತೆ ಬದಲಾವಣೆ ಆಂದೋಲನ ಕಾರ್ಯಕ್ರಮದಲ್ಲಿ ಗ್ರಾಮಲೆಕ್ಕಿಗರಾದ ಹೊಸಕೋಟೆ ಗ್ರಾಮಲೆಕ್ಕಿಗೆ ನಸ್ಸೀಮ, ದೀಪಿಕಾ, ಡಾಪ್ನ ಡಿ. ಕ್ರುಸ್, ಆಶಾ ಬ್ಯಾಡಗೌಡರ್, ನಾಗೇಂದ್ರ, ಗ್ರಾಮ ಸಹಾಯಕ ಶಿವಪ್ಪ ಉಪಸ್ಥಿತರಿದ್ದರು.