ವೀರಾಜಪೇಟೆ, ನ. 21: ಬೆಂಗಳೂರಿನಿಂದ ಗೋಣಿಕೊಪ್ಪಲಿಗೆ ಬರುತ್ತಿದ್ದ (ಕೆ.ಎ.-02 ಎ.ಎಫ್ 5742) ಮಹೇಂದ್ರ ಕಾರನ್ನು ಅರಣ್ಯ ಸಂಚಾರಿ ದಳ ಗೋಣಿಕೊಪ್ಪಲಿನ ಆರ್.ಎಂ.ಸಿ ಯಾರ್ಡ್ ಬಳಿ ಖಚಿತ ಮಾಹಿತಿ ಮೇರೆಗೆ ಶೋಧಿಸಿದಾಗ ಕಾರಿನಲ್ಲಿ ಅಪರೂಪದ ಅಳಿವಿನ ಅಂಚಿನಲ್ಲಿರುವ ನಕ್ಷತ್ರ ಆಮೆ ಪತ್ತೆ ಯಾಗಿದೆ. ಕಾರು ಹಾಗೂ ನಕ್ಷತ್ರ ಆಮೆ ಯನ್ನು ವಶ ಪಡಿಸಿಕೊಂಡ ಪೊಲೀಸರು ನಾಲ್ವರನ್ನು ಬಂಧಿಸಿ ಪೊನ್ನಂಪೇಟೆ ಸಿವಿಲ್ ಜಡ್ಜ್ ನ್ಯಾಯಾ ಲಯದ ಮುಂದೆ ಹಾಜರುಪಡಿಸಿದ ಮೇರೆ ಎಲ್ಲಾ ಆರೋಪಿಗಳನ್ನು 15 ದಿನಗಳ ತನಕ ನ್ಯಾಯಾಂಗ ಬಂಧನ ದಲ್ಲಿಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.ನಕ್ಷತ್ರ ಆಮೆಯನ್ನು ಆಂಧ್ರ ರಾಜ್ಯದಿಂದ ಅಕ್ರಮವಾಗಿ ಸಾಗಿಸಿದ್ದು ದಕ್ಷಿಣ ಕೊಡಗಿನಲ್ಲಿ ನಕ್ಷತ್ರ ಆಮೆಗೆ ರೂ 1,50,000 ಬೆಲೆ ನಿಗದಿಪಡಿಸಿ ಕೊಂಡ ನಾಲ್ವರು, ಆಮೆಯನ್ನು ಗಿರಾಕಿಗೆ ತಲುಪಿಸಿ ಹಣ ಪಡೆಯಲು ಪ್ರಯತ್ನಿಸುತಿದ್ದಾಗ ಅರಣ್ಯ ಸಂಚಾರಿ ದಳದ ಬಲೆಗೆ ಬಿದ್ದಿದ್ದಾರೆ. ಆಂಧ್ರದ ಕರ್ನೂಲ್ ಜಿಲ್ಲೆಯ ಮಂಚಲ ಗ್ರಾಮದ ಟಿ.ಲಕ್ಷ್ಮಣ, ಮಂತ್ರಾಲಯಂ ಮಂಡಲಂನ ಆರ್.ಲಕ್ಷ್ಮಿನಾರಾಯಣ, ತೆಲಂಗಾಣದ ಮೆಬೂಬ್ ನಗರ ಬಳಿಯ ಸಿಂಧನೂರು ಗ್ರಾಮದ ತೆಲುಗರ ಈ ತಿಮ್ಮಪ್ಪ, ಬೆಂಗಳೂರಿನ ಬೊಮ್ಮನ ಹಳ್ಳಿಯ ಎಸ್.ನಾಗೇಶ್ ಎಂಬ ನಾಲ್ವರನ್ನು ಬಂಧಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಘಟಕದ ಅಧೀಕ್ಷಕ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ವೀರಾಜಪೇಟೆ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ವೀಣಾ ನಾಯಕ್, ಸಿಬ್ಬಂದಿ ಗಳಾದ ಕೆ.ಬಿ. ಸೋಮಣ್ಣ, ಟಿ.ಪಿ. ಮಂಜುನಾಥ್, ಎಂ.ಬಿ.ಗಣೇಶ್, ಪಿ.ಬಿ. ಮೊಣ್ಣಪ್ಪ ಹಾಗೂ ಸಿ.ಎಂ. ರೇವಪ್ಪ ಭಾಗವಹಿಸಿದ್ದರು.