ವೀರಾಜಪೇಟೆ, ನ. 21: ಕೊಡಗಿನ ಮೂರು ತಾಲೂಕನ್ನೊಳಗೊಂಡು ವೀರಾಜಪೇಟೆಯಲ್ಲಿ ಸ್ಥಾಪನೆಯಾಗಿರುವ ವೀರಾಜಪೇಟೆ ಕೊಡವ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸಂಸ್ಥೆಯನ್ನು ಜಿಲ್ಲೆಯಲ್ಲಿ ಉತ್ತಮ ಸಹಕಾರಿ ಸಂಸ್ಥೆಯಾಗಿ ಬೆಳೆಸಲು ಎಲ್ಲರ ಪರಸ್ಪರ ಸಹಕಾರ ಅಗತ್ಯ ಎಂದು ಸಂಘದ ಅಧ್ಯಕ್ಷ ನೆಲ್ಲಮಕ್ಕಡ ಪಿ. ಉಮೇಶ್ ಮುತ್ತಣ್ಣ ಹೇಳಿದರು.

ವೀರಾಜಪೇಟೆ ಟೌನ್ ಸಹಕಾರ ಬ್ಯಾಂಕ್‍ನ ಸಭಾಂಗಣದಲ್ಲಿ ನಡೆದ ಮೊದಲನೇ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುತ್ತಣ್ಣ ಅವರು, ಈ ಸೌಹಾರ್ದ ಸಹಕಾರಿಯು ಹಿಂದಿನ ಎಲ್ಲ ಪ್ರವರ್ತಕರ ಹಾಲಿ ಆಡಳಿತ ಮಂಡಳಿ ನಿರ್ದೇಶಕರುಗಳ, ಸದಸ್ಯರುಗಳ, ಸಿಬ್ಬಂದಿಗಳ ಪರಿಶ್ರಮ ಸಹಕಾರದಿಂದ ಆರಂಭಗೊಂಡಿದ್ದು, ಸಂಘದ ಪ್ರಗತಿಯು ಆಶಾದಾಯಕವಾಗಿ ಮುಂದುವರೆಯುತ್ತಿದೆ. 2020ರ ಮಾರ್ಚ್ ತನಕ ಒಟ್ಟು 840 ಮಂದಿ ಸದಸ್ಯರುಗಳಿದ್ದು ಪಾಲು ಬಂಡವಾಳ ರೂ. 27.02 ಲಕ್ಷ ಆಗಿದೆ. ಮುಂದಿನ 2020-21ನೇ ಸಾಲಿನಲ್ಲಿ ಒಟ್ಟು ಸದಸ್ಯ ಬಲ 2000 ಹಾಗೂ ಪಾಲು ಬಂಡವಾಳ ರೂ. 50 ಲಕ್ಷ ಹಾಗೂ ಒಟ್ಟು ಠೇವಣಾತಿ ರೂ. 250 ಲಕ್ಷಗಳ ಸಂಗ್ರಹದ ನಿರೀಕ್ಷೆ ಇದೆ. ಠೇವಣಾತಿಯ ಮೊಬಲಗು ರೂ. 131.8 ಲಕ್ಷ ಸಂಗ್ರಹಣೆ ಇದರ ಆಧಾರದ ಮೇಲೆ ರೂ. 25.87 ಲಕ್ಷ ಸಾಲ ವಿತರಣೆ ಮಾಡಿದ್ದು, 2020 ಮಾರ್ಚ್ ಅಂತ್ಯಕ್ಕೆ ಶೇ. 100 ರಷ್ಟು ಸಾಲ ವಸೂಲಾತಿಯಾಗಿದೆ. ರೂ. 135 ಲಕ್ಷವನ್ನು ನಿರಖು ಠೇವಣಾತಿ ಮೇಲೆ ಹೂಡಲಾಗಿದೆ. ಇದು ಸೌಹಾರ್ದ ಸಹಕಾರಿ ಸಂಸ್ಥೆಯಾಗಿರುವುದರಿಂದ ಸಹಕಾರಿಗೆ ಅಡಗಿದ ಹೆಚ್ಚಿನ ಸಂಘ ಸಂಸ್ಥೆಗಳು ಈ ಸಹಕಾರಿ ಸಂಸ್ಥೆಯ ಮೂಲಕ ವ್ಯವಹಾರ ನಡೆಸುವುದರಿಂದ ಸಂಸ್ಥೆ ಪ್ರಗತಿಯತ್ತ ಮುಂದುವರೆಯಲು ಸಾಧ್ಯವಾಗಲಿದೆ ಎಂದರು.

ಮಹಾಸಭೆಯಲ್ಲಿ ಕೋವಿಡ್ ಷರತ್ತುಗೊಳಪಟ್ಟು ಸಂಘದ ನಿರ್ದೇಶಕರು, ಸದಸ್ಯರುಗಳು ಭಾಗವಹಿಸಿದ್ದರು.