ಮಡಿಕೇರಿ, ನ. 21: ಭಾರತೀಯ ಸೇನೆಯಲ್ಲಿ ಸೇರ್ಪಡೆಗೊಂಡು ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿಯೊಂದಿಗೆ ಉತ್ತಮ ಸಾಧನೆ ತೋರಿರುವ ಕೊಡಗಿನ ಯುವ ಅಧಿಕಾರಿ ಚೋಳಂಡ ವರುಣ್ ಗಣಪತಿ, ಇದೀಗ ಸೋರ್ಡ್ ಆಫ್ ಹಾನರ್ ಸಹಿತವಾಗಿ ರಾಷ್ಟ್ರಪತಿಗಳ ಚಿನ್ನದ ಪದಕದ ಸಾಧನೆ ಯೊಂದಿಗೆ ಲೆಫ್ಟಿನೆಂಟ್ ಆಗಿ ನಿಯುಕ್ತಿಗೊಂಡಿದ್ದಾರೆ. ಇವರ ಪಾಸಿಂಗ್ ಔಟ್ ಪೆರೇಡ್ ಇಂದು ಚೆನ್ನೈಯಲ್ಲಿರುವ ಆಫಿಸರ್ಸ್ ಟೈನಿಂಗ್ ಅಕಾಡೆಮಿಯಲ್ಲಿ ನಡೆಯಿತು. ಈ ಸಂದರ್ಭ ತರಬೇತಿಯಲ್ಲಿನ ಆಲ್‍ರೌಂಡ್ ಸಾಧನೆಗಾಗಿ ನೀಡುವ ಸೋರ್ಡ್ ಆಫ್ ಹಾನರ್ ಸಹಿತವಾಗಿ ಉನ್ನತ ಸ್ಥಾನಕ್ಕಾಗಿ ಚಿನ್ನದ ಪದಕವನ್ನು ಪಡೆದುಕೊಂಡರು. ಈ ಎರಡು ಸಾಧನೆ ಒಟ್ಟಿಗೆ ಮಾಡಿರುವ ಜಿಲ್ಲೆಯ ಕೆಲವರಲ್ಲಿ ವರುಣ್ ಗಣಪತಿ ಒಬ್ಬರಾಗಿದ್ದು, ಸೇನಾ ಪರಂಪರೆಗೆ ಹೆಸರಾಗಿರುವ ಜಿಲ್ಲೆಗೆ ಮತ್ತೊಂದು ಗರಿ ತಂದಿದ್ದಾರೆ. ಈ ಹಿಂದೆ ಸೇನೆಗೆ ಸಂಬಂಧಿಸಿದಂತೆ ಸರ್ವೀಸ್ ಸೆಲೆಕ್ಷನ್ ಬೋರ್ಡ್‍ನ ಮೂಲಕ 248 ಮಂದಿಯ ಪೈಕಿ ಮೊದಲಿಗರಾಗಿ ಆಯ್ಕೆಯಾಗಿದ್ದ ವರುಣ್ ಆಲ್ ಇಂಡಿಯಾ ರ್ಯಾಂಕ್‍ನಲ್ಲೂ 14ನೇ ಸ್ಥಾನ ಪಡೆದಿದ್ದರು. ತರಬೇತಿ ಸಂದರ್ಭದ ಪರೀಕ್ಷೆಯಲ್ಲಿ ಇವರು ಭೂಸೇನೆ, ವಾಯುಸೇನೆ ಹಾಗೂ ನೌಕಾದಳ ಈ ಮೂರು ವಿಭಾಗದಲ್ಲೂ ಪ್ರಥಮ ಸ್ಥಾನ ಪಡೆದು ವಿಶೇಷ ಸಾಧನೆ ತೋರಿದ್ದರು. ತನ್ನ ಗುರಿ ಸಾಧನೆಯ ಹಾದಿಯಲ್ಲಿ ಇವರು ಓಆಂ, ಂಈಅಂಖಿ, ಅಆS ಪರೀಕ್ಷೆಯ ವಿವಿಧ ಹಂತಗಳಲ್ಲಿ ಈ ಪರೀಕ್ಷೆಗಳಲ್ಲಿ 7 ಬಾರಿ ಉತ್ತೀರ್ಣರಾಗಿದ್ದರು. ಇದೀಗ ಬೆಸ್ಟ್ ಆಲ್ ರೌಂಡ್ ಕೆಡೆಟ್ ಆಗಿ ಸೋರ್ಡ್ ಆಫ್ ಹಾನರ್ ಹಾಗೂ ಉನ್ನತ ಶ್ರೇಣಿಗಾಗಿ ರಾಷ್ಟ್ರಪತಿಗಳ ಚಿನ್ನದ ಪದಕಗೊಂದಿಗೆ ಲೆಫ್ಟಿನೆಂಟ್ ಆಗಿ ನಿಯುಕ್ತಿಗೊಂಡಿದ್ದಾರೆ.

ವರುಣ್ ಗಣಪತಿ, ಮೂಲತಃ ಜಿಲ್ಲೆಯವರಾದ ಪ್ರಸ್ತುತ ಚಿಕ್ಕಬಳ್ಳಾಪುರದಲ್ಲಿ ಲೋಕಾಯುಕ್ತ ಎಸ್.ಪಿ. ಆಗಿ ಕಾರ್ಯನಿರ್ವಹಿಸುತ್ತಿರುವ, ಈ ಹಿಂದೆ ಕುಶಾಲನಗರದಲ್ಲಿ ಡಿವೈಎಸ್ಪಿ ಆಗಿದ್ದ ಚೋಳಂಡ ಪೂವಯ್ಯ ಹಾಗೂ ಧರಣಿ (ತಾಮನೆ ಮಣವಟ್ಟಿರ) ದಂಪತಿಯ ಪುತ್ರರಾಗಿದ್ದಾರೆ.