ಕರಿಕೆ, ನ. 21: ಜೀವನದಿ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ಭಗ್ನಗೊಂಡು ಇನ್ನೂ ವಿಸರ್ಜಿಸಲ್ಪಡದೇ ಇರುವ ಶಿವಲಿಂಗದ ಕುರಿತಾಗಿ ಇತ್ತೀಚೆಗೆ ಅಧಿವೇಶನದಲ್ಲಿ ಪ್ರಸ್ತಾಪಗೊಂಡ ಬೆನ್ನಲ್ಲೇ ಇಂದು ಮುಜರಾಯಿ ಇಲಾಖೆಯ ಆಗಮ ಪಂಡಿತರು ಸರಕಾರದ ಸೂಚನೆಯಂತೆ ಕಾವೇರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದರು.ಮುಜರಾಯಿ ಇಲಾಖೆಯ ಬೆಂಗಳೂರಿನಲ್ಲಿರುವ ಕೇಂದ್ರ ಕಚೇರಿಯಿಂದ ಬಂದಿದ್ದ ಆಗಮ ಪಂಡಿತರಾದ ವಿಜಯಕುಮಾರ್ ಅವರು ಭಾಗಮಂಡಲದಲ್ಲಿ ಭಗಂಡೇಶ್ವರ ಸನ್ನಿಧಿಗೆ ತೆರಳಿ ಪೂಜೆ ಸಲ್ಲಿಸಿ ನಂತರ ತಲಕಾವೇರಿಗೆ ಭೇಟಿ ನೀಡಿದರು. ಅಲ್ಲಿಯೂ ಪೂಜೆ ನೆರವೇರಿಸಿ ಬಳಿಕ ದೇವಾಲಯದ ಬಲಭಾಗದಲ್ಲಿ ಇರುವ ಹತ್ತಿ ಮರದ ಬುಡದಲ್ಲಿ ಇದ್ದ ಪಾಣಿಪೀಠ ಹಾಗೂ ಅನ್ನ ಛತ್ರದ ಪಕ್ಕದ ಕೊಠಡಿಯಲ್ಲಿ ಮರದ ಪೆಟ್ಟಿಗೆಯೊಂದರಲ್ಲಿ ತುಂಬಿಸಿಡಲಾಗಿದ್ದ ಭಗ್ನಗೊಂಡ ಶಿವಲಿಂಗವನ್ನು ಹೊರ ತೆಗೆದು ಪರಿಶೀಲನೆ ನಡೆಸಿದರು. ಈ ಸಂದರ್ಭ ಅವರೊಂದಿಗೆ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಗೋವಿಂದ ಭಟ್ ಅವರು ಕೂಡ ಇದ್ದರು.ಪರಿಶೀಲನೆಯ ಬಳಿಕ ಭಾಗಮಂಡಲದಲ್ಲಿ ಸಭೆ ನಡೆಯಿತು. ಸಭೆಯ ಬಳಿಕ ‘ಶಕ್ತಿ’ಯೊಂದಿಗೆ ಮಾತನಾಡಿದ ಆಗಮ ಪಂಡಿತರಾದ ವಿಜಯಕುಮಾರ್ ಅವರು, ಪಾಣಿಪೀಠ ಹಾಗೂ ಭಗ್ನಗೊಂಡ ಶಿವಲಿಂಗವನ್ನು ಈಗಾಗಲೇ ಪರಿಶೀಲನೆ ಮಾಡಲಾಗಿದ್ದು, ಏನು ಮಾಡಬೇಕು ಎಂಬದರ ಬಗ್ಗೆ ಮುಂದೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಶಿವಲಿಂಗದ ಪರಿಶೀಲನೆ ವೇಳೆ ಹಾಜರಿದ್ದ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಭಗ್ನಗೊಂಡ ಶಿವಲಿಂಗದ ವಿಸರ್ಜನೆ ಸಂಬಂಧ ಪ್ರಕರಣ ರಾಜ್ಯ ಉಚ್ಚ ನ್ಯಾಯಾಲಯದ ಮುಂದಿದ್ದು, ಆದ್ದರಿಂದ ಈ ಬಗ್ಗೆ ತಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥಗೊಂಡ ಬಳಿಕ ಸರಕಾರದ ಮಟ್ಟದಲ್ಲಿ ವ್ಯವಹರಿಸಿ ಭಗ್ನಗೊಂಡಿರುವ ಶಿವಲಿಂಗದ ಕುರಿತ ಗೊಂದಲಕ್ಕೆ ತೆರೆ ಎಳೆಯಲಾಗುವುದು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಭಗ್ನಗೊಂಡ ಶಿವಲಿಂಗದ ಕುರಿತು ಜನಸಾಮಾನ್ಯರಲ್ಲಿ ಗೊಂದಲ, ಅನುಮಾನಗಳಿರುವ ಬಗ್ಗೆ ಕಳೆದ ಅಧಿವೇಶನದಲ್ಲಿ ಸದನದ ಗಮನ ಸೆಳೆದ ಸಂದರ್ಭ ಆಗಮ ಪಂಡಿತರನ್ನು ಸ್ಥಳ ಪರಿಶೀಲನೆಗೆ ಕಳುಹಿಸಿಕೊಡುವುದಾಗಿ ಮುಜರಾತಿ ಇಲಾಖೆ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿಯವರು ಭರವಸೆ ನೀಡಿದ್ದರು. ಅದರಂತೆ ಇಂದು ಆಗಮ ಪಂಡಿತರು ಬಂದಿದ್ದು, ಪ್ರಕರಣ ನ್ಯಾಯಾಲಯದಲ್ಲಿರುವ ಸಂಬಂಧ ಆಗಮ ಪಂಡಿತರು ಸರಕಾರದ ಪರವಾಗಿ ನ್ಯಾಯಾಲಯಕ್ಕೆ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲಿದ್ದಾರೆ ಎಂದು ಹೇಳಿದರಲ್ಲದೆ, ಈ ಸಮಸ್ಯೆಗೆ ಆದಷ್ಟು ಶೀಘ್ರ ಪರಿಹಾರ ಸಿಗುವಂತಾಗಲಿ ಎಂದು ಆಶಿಸಿದರು.
ತಲಕಾವೇರಿ-ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಮಾತನಾಡಿ, ನ್ಯಾಯಾಲಯದಲ್ಲಿರುವ ಪ್ರಕರಣ ಇತ್ಯರ್ಥಗೊಂಡ ಬಳಿಕ ಭಗ್ನಗೊಂಡಿರುವ ಶಿವಲಿಂಗದ ವಿಸರ್ಜನೆಗೆ ತಂತ್ರಿಗಳ ಸಲಹೆ ಪಡೆದು ಕ್ರಮಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭ ತಕ್ಕರಾದ ಕೋಡಿ ಮೋಟಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನಿಡ್ಯಮಲೆ ಮೀನಾಕ್ಷಿ, ಉದಿಯಂಡ ಸುಭಾಶ್ ಮತ್ತಿತರರು ಇದ್ದರು.
- ಸುಧೀರ್