ಸೋಮವಾರಪೇಟೆ, ನ. 21: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ತಾ. 26 ರಂದು ವಿವಿಧ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ದೇಶವ್ಯಾಪಿ ಮುಷ್ಕರ ನಡೆಯಲಿದ್ದು, ಜಿಲ್ಲೆಯಲ್ಲಿಯೂ ಪ್ರತಿಭಟನೆ ನಡೆಯಲಿದೆ ಎಂದು ಗ್ರಾ.ಪಂ. ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ 10 ಕಾರ್ಮಿಕ ಸಂಘಟನೆಗಳನ್ನು ಒಳಗೊಂಡಂತೆ ಮುಷ್ಕರ ನಡೆಯಲಿದ್ದು, ತಾ. 26 ರಂದು ಸೋಮವಾರಪೇಟೆ ಜೇಸೀ ವೇದಿಕೆಯ ಸಮೀಪ ಸಭೆ ನಡೆಸಿ, ತಾಲೂಕು ಕಚೇರಿ ಎದುರು ಮುಷ್ಕರ ಹಮ್ಮಿಕೊಳ್ಳಲಾಗುವದು ಎಂದರು.

ಕೇಂದ್ರ ಸರ್ಕಾರವು ಕಾರ್ಮಿಕ, ರೈತ, ಬಡ ಜನರ ವಿರೋಧಿಯಾಗಿ ಆಡಳಿತ ನಡೆಸುತ್ತಿದ್ದು, ದುಡಿಯುವ ವರ್ಗವನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳುತ್ತಿದೆ. ಬಂಡವಾಳಶಾಹಿಗಳ ಪರವಾಗಿ ಆಡಳಿತ ನಡೆಸುತ್ತಿರುವ ಸರ್ಕಾರದ ವಿರುದ್ಧ ತಾ. 26 ರಂದು ಕಾರ್ಮಿಕರು ಕೆಲಸವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು. ಈಗಾಗಲೇ ಬ್ಯಾಂಕ್‍ಗಳ ವಿಲೀನದಿಂದಾಗಿ ಸಂಕಷ್ಟ ಎದುರಿಸುವಂತಾಗಿದ್ದು, ಮುಂದೊಂದು ದಿನ ಬ್ಯಾಂಕ್ ಗಳನ್ನೂ ಖಾಸಗೀಕರಣ ಮಾಡುವ ಹುನ್ನಾರ ನಡೆಸ ಲಾಗುತ್ತಿದೆ. ಇದರೊಂದಿಗೆ ಎಲ್‍ಐಸಿ, ರೈಲ್ವೇ, ವಿಮಾನ ನಿಲ್ದಾಣ, ವಿದ್ಯುತ್ ನಿಗಮಗಳನ್ನೂ ಖಾಸಗೀಕರಣ ಮಾಡಲಾಗುತ್ತಿದ್ದು, ಕಾರ್ಮಿಕ ವರ್ಗ ಜೀವನ ಭದ್ರತೆಯನ್ನು ಕಳೆದುಕೊಳ್ಳುತ್ತಿದೆ. ಇದರೊಂದಿಗೆ ನಿರುದ್ಯೋಗ ಪ್ರಮಾಣವೂ ಅಧಿಕವಾಗುತ್ತಿದೆ ಎಂದು ಗೋಷ್ಠಿಯಲ್ಲಿದ್ದ ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ ಆರೋಪಿಸಿದರು. ಕೊರೊನಾ ಸಂದರ್ಭ ಜನರು ಮನೆಯಲ್ಲಿದ್ದ ಸಮಯವನ್ನು ಬಳಸಿಕೊಂಡು ರೈತ, ಕಾರ್ಮಿಕ, ಬಡವರ ವಿರೋಧಿ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಇವುಗಳನ್ನು ವಿರೋಧಿಸಿ ತಾ. 26ರಂದು ನಡೆಯುವ ಮುಷ್ಕರಕ್ಕೆ ವಿವಿಧ ಕಾರ್ಮಿಕ, ದಲಿತ, ಆದಿವಾಸಿ ಸಂಘಟನೆಗಳು ಬೆಂಬಲ ನೀಡಿವೆ ಎಂದರು.

ಗೋಷ್ಠಿಯಲ್ಲಿ ಅಂಗನವಾಡಿ ನೌಕರರ ಸಂಘದ ತಾಲೂಕು ಉಪ ಕಾರ್ಯದರ್ಶಿ ಜಮುನ, ಗ್ರಾ.ಪಂ. ನೌಕರರ ಸಂಘದ ತಾಲೂಕು ಅಧ್ಯಕ್ಷ ನವೀನ್, ಐಎನ್‍ಟಿಯುಸಿ ನಗರಾಧ್ಯಕ್ಷ ಗಣೇಶ್ ಅವರುಗಳು ಉಪಸ್ಥಿತರಿದ್ದರು.