ಸೋಮವಾರಪೇಟೆ, ನ.20: ರೂ. 4.15 ಕೋಟಿ ವೆಚ್ಚದಲ್ಲಿ ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಸಿಂಥೆಟಿಕ್ ಟರ್ಫ್ ಹಾಕಿ ಕ್ರೀಡಾಂಗಣದ ಕಾಮಗಾರಿ ಕಳಪೆಯಾಗುತ್ತಿರುವ ಆರೋಪದ ಹಿನ್ನೆಲೆ ಗುಣನಿಯಂತ್ರಣ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಹೈದರಾಬಾದ್ ಮೂಲದ ಗ್ರೇಟ್ ಸ್ಫೋಟ್ರ್ಸ್ ಇನ್‍ಫ್ರಾ ಪ್ರೈ.ಲಿ. ಸಂಸ್ಥೆ ವತಿಯಿಂದ ರೂ. 4.15ಕೋಟಿ ವೆಚ್ಚದ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು, ಕಾಮಗಾರಿ ವಿಳಂಬ ಹಾಗೂ ರಾತ್ರಿ ಸಮಯದಲ್ಲಿ ಕಾಮಗಾರಿ ನಿರ್ವಹಿಸುತ್ತಿದ್ದ ಹಿನ್ನೆಲೆಯಲ್ಲಿ ಶಾಸಕ ಅಪ್ಪಚ್ಚು ರಂಜನ್ ಹಾಗು ಕಾಮಗಾರಿ ಪರಿಶೀಲನಾ ಉಸ್ತುವಾರಿ ಸಮಿತಿಯವರು ಸ್ಥಳ ಪರೀಶೀಲನೆ ನಡೆಸಿ, ಕಳಪೆ ಕಾಮಗಾರಿಯ ಸಂಶಯ ವ್ಯಕ್ತಪಡಿಸಿದ್ದರು.

ಈ ಬಗ್ಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿ, ಅಂದಾಜು ಪಟ್ಟಿಯಂತೆ ವೈಜ್ಞಾನಿಕವಾಗಿ ಕಾಮಗಾರಿ ನಿರ್ವಹಿಸಲು ಸೂಚಿಸಿದ ಹಿನ್ನೆಲೆ ಗುಣ ನಿಯಂತ್ರಣ ಅಧಿಕಾರಿಗಳ ತಂಡ ಕಾಮಗಾರಿಯನ್ನು ಪರಿಶೀಲಿಸಿತು.

ಕಾಮಗಾರಿಯ ಗುಣಮಟ್ಟ ಸಮರ್ಪಕವಾಗಿಲ್ಲ. ಅಂದಾಜುಪಟ್ಟಿ ಯಂತೆ ಕಾಮಗಾರಿ ನಿರ್ವಹಿಸಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳುತ್ತಿದೆ. ಇಲಾಖೆಯ ಸಹಾಯಕ ನಿರ್ದೇಶಕರಿಗೆ ದೂರು ನೀಡಲಾಗುವುದು ಎಂದು ಕಾಮಗಾರಿ ಪರಿಶೀಲನಾ ಉಸ್ತುವಾರಿ ಸಮಿತಿ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ತಿಳಿಸಿದರು.