ಕೂಡಿಗೆ, ನ. 20: ಕುಶಾಲನಗರ ಹೋಬಳಿ ವ್ಯಾಪ್ತಿಯ ಶಿರಂಗಾಲ, ತೊರೆನೂರು, ಹೆಬ್ಬಾಲೆ, ಕೂಡಿಗೆ, ಕೂಡುಮಂಗಳೂರು, ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ಉಪ ಗ್ರಾಮಗಳಲ್ಲಿ ದೀಪಾವಳಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಹಬ್ಬದ ಅಂಗವಾಗಿ ಗ್ರಾಮವು ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿದ್ದವು. ಅಲ್ಲದೆ ಗ್ರಾಮದ ಮಹಿಳೆಯರು ತಮ್ಮ ಮನೆಯ ಮುಂದೆ ವಿವಿಧ ಬಗೆಯ ರಂಗೋಲಿ ಹಾಕುವ ಮೂಲಕ ಮನೆಯನ್ನು ಸಿಂಗಾರಗೊಳಿಸಿದ್ದರು. ಗ್ರಾಮದ ದೇವಾಲಯಗಳಲ್ಲಿ ಕಾರ್ತಿಕ ಮಾಸದ ವಿಶೇಷ ಪೂಜೆ ನಡೆಯಿತು. ಗೋಪೂಜೆ ಕೂಡ ನಡೆದಿದ್ದು, ಗ್ರಾಮದ ರೈತರು ತಮ್ಮ ಗೋವುಗಳನ್ನು ತೊಳೆದು ಸಿಂಗರಿಸಿ ಪೂಜೆ ಸಲ್ಲಿಸಿದರು.