ಸೋಮವಾರಪೇಟೆ, ನ. 20: ಬೈಕ್ ಅವಘಡಕ್ಕೀಡಾಗಿ ಚಾಲಕ ಸ್ಥಳದಲ್ಲೇ ದುರ್ಮರಣ ಕ್ಕೀಡಾಗಿರುವ ಘಟನೆ ಪಟ್ಟಣದ ಬಸವೇಶ್ವರ ರಸ್ತೆಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ.ಕರ್ಕಳ್ಳಿ ಗ್ರಾಮದ ಪಳನಿ ಎಂಬವರ ಪುತ್ರ, ಪಟ್ಟಣದ ಹೊಟೇಲ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದ ರಕ್ಷಿತ್ (23) ಎಂಬಾತನೇ ಸಾವನ್ನಪ್ಪಿದ ದುರ್ದೈವಿ. ಇಂದು ಮಧ್ಯಾಹ್ನ ಪಟ್ಟಣದಿಂದ ಕರ್ಕಳ್ಳಿ ಗ್ರಾಮಕ್ಕೆ ಪಲ್ಸರ್ ಬೈಕ್‍ನಲ್ಲಿ ತೆರಳುತ್ತಿದ್ದ ಸಂದರ್ಭ, ಅಬ್ಬೂರುಕಟ್ಟೆಯ ವ್ಯಕ್ತಿ ಚಾಲಿಸುತ್ತಿದ್ದ ಸ್ಕೂಟರ್ ಗುಂಡಿ ತಪ್ಪಿಸುವ ಸಲುವಾಗಿ ಬಲಬದಿಗೆ ಬಂದಿದೆ. ಈ ಸಂದರ್ಭ ಹಿಂಬದಿಯಿಂದ ಆಗಮಿಸಿದ ರಕ್ಷಿತ್ ಚಾಲಿಸುತ್ತಿದ್ದ ಬೈಕ್ ಡಿಕ್ಕಿಯಾಗಿದೆ.(ಮೊದಲ ಪುಟದಿಂದ) ಪರಿಣಾಮ ಪಲ್ಸರ್ ಬೈಕ್ ರಸ್ತೆಯಲ್ಲಿನ ಗುಂಡಿಗೆ ಬಿದ್ದು, ಚಾಲಕನ ನಿಯಂತ್ರಣ ತಪ್ಪಿ ಸುಮಾರು 20 ಮೀಟರ್ ಉಜ್ಜಿಕೊಂಡು ಹೋಗಿದೆ. ಇದರಿಂದಾಗಿ ರಕ್ಷಿತ್‍ನ ತಲೆ ಭಾಗಕ್ಕೆ ತೀವ್ರ ಪೆಟ್ಟಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮೃತ ರಕ್ಷಿತ್ ಪೋಷಕರು ಸೇರಿದಂತೆ ಈರ್ವರು ಸಹೋದರಿಯರು, ಓರ್ವ ಸಹೋದರರನ್ನು ಅಗಲಿದ್ದು, ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.