ಮಡಿಕೇರಿ, ನ. 19: ರಾಜ್ಯ ಸರ್ಕಾರ ವಿದ್ಯುತ್ ದರ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಕ್ರಮವನ್ನು ಖಂಡಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಇಂದಿರಾ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್ ಪ್ರಮುಖರು ಹಾಗೂ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್, ಕೋವಿಡ್ ನಿಂದಾಗಿ ಜನರು ಆರ್ಥಿಕ ಸಂಕಷ್ಟ ವನ್ನು ಎದುರಿಸುತ್ತಿರುವಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವ ರಾಜ್ಯ ಸರ್ಕಾರ ಜನರನ್ನು ಸಂದಿಗ್ಧ ಪರಿಸ್ಥಿತಿಗೆ ತಳ್ಳಿದೆ ಎಂದು ಟೀಕಿಸಿದರು.
ಹಿರಿಯ ಮುಖಂಡ ಟಿ.ಪಿ. ರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ನಗರಾಧ್ಯಕ್ಷ ಅಬ್ದುಲ್ ರಜಾಕ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಂಯೋಜಕ ತೆನ್ನಿರಮೈನಾ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಪ್ರಧಾನ ಕಾರ್ಯದರ್ಶಿ ಮಿನಾಜ್ ಪ್ರವೀಣ್, ನಗರ ಮಹಿಳಾ ಅಧ್ಯಕ್ಷೆ ಫ್ಯಾನ್ಸಿ ಪಾರ್ವತಿ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಉಸ್ಮಾನ್, ಯುವ ಕಾಂಗ್ರೆಸ್ ನಗರಾಧ್ಯಕ್ಷ ಸದಾ ಮುದ್ದಪ್ಪ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ನಾಪಂಡ ರವಿ, ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕಲೀಲ್ ಬಾಷ, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಮೀದೇರಿರ ನವೀನ್, ಸೋಮವಾರಪೇಟೆ ಬ್ಲಾಕ್ ಅಧ್ಯಕ್ಷ ಸತೀಶ್, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಬಾಲಕೃಷ್ಣ, ವಕ್ಫ್ ಅಧ್ಯಕ್ಷ ಕೆ.ಎ. ಯಾಕುಬ್ ಮತ್ತಿತರರು ಪಾಲ್ಗೊಂಡಿದ್ದರು.