ಕುಶಾಲನಗರ, ನ. 19: ಕುಶಾಲನಗರ - ಮೈಸೂರು ರಸ್ತೆಯ ಚರಂಡಿಯಲ್ಲಿ ಹರಿಯುತ್ತಿರುವ ಕಲುಷಿತ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವಲ್ಲಿ ಕುಶಾಲನಗರ ಪ.ಪಂ. ಶಾಶ್ವತ ಯೋಜನೆ ರೂಪಿಸಲು ಕ್ರಮಕೈಗೊಂಡಿದೆ. ಕೊಪ್ಪ ಅರಣ್ಯ ತಪಾಸಣಾ ಗೇಟ್ ಬಳಿ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಖಾಸಗಿ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಲಾಯಿತು.
ಪ.ಪಂ. ಅಧ್ಯಕ್ಷ ಜಯವರ್ಧನ್, ಮುಖ್ಯಾಧಿಕಾರಿ ಸುಜಯ್‍ಕುಮಾರ್ ಮತ್ತು ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿದ್ದು ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಚರಂಡಿ ಸಮಸ್ಯೆಗೆ ಪರಿಹಾರ ಒದಗಿಸಲು ಪ್ರಯತ್ನ ನಡೆದಿದೆ. ಮೇಲ್ಭಾಗದಿಂದ ಕೆಲವು ವಾಣಿಜ್ಯ ಕಟ್ಟಡಗಳ ಕಲುಷಿತ ತ್ಯಾಜ್ಯ ಚರಂಡಿಗಳಲ್ಲಿ ಹರಿಯುತ್ತಿದ್ದು ನೇರವಾಗಿ ನದಿಗೆ ಹರಿಸದಂತೆ ಮಾಡುವ ನಿಟ್ಟಿನಲ್ಲಿ ಈ ಯೋಜನೆ ಕೈಗೊಳ್ಳಲಾಗುತ್ತಿದೆ ಎಂದು ಅಧ್ಯಕ್ಷ ಜಯವರ್ಧನ್ ತಿಳಿಸಿದ್ದಾರೆ.
ಕಲುಷಿತ ನೀರನ್ನು ಶುದ್ಧೀಕರಣ ಗೊಳಿಸಿ ನಂತರ ವಿಲೇವಾರಿ ಮಾಡಲು ಈ ಯೋಜನೆ ಮೂಲಕ ಸಾಧ್ಯ ಎಂದು ಮುಖ್ಯಾಧಿಕಾರಿ ಸುಜಯ್‍ಕುಮಾರ್ ಮಾಹಿತಿ ನೀಡಿದ್ದು ಸಧ್ಯದಲ್ಲಿಯೇ ಕಾಮಗಾರಿ ಪ್ರಾರಂಭ ಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಈ ಸಂದರ್ಭ ಸದಸ್ಯ ಅಮೃತ್‍ರಾಜ್, ಇಂಜಿನಿಯರ್ ಶ್ರೀದೇವಿ ಮತ್ತು ಖಾಸಗಿ ಸಂಸ್ಥೆಯ ಪ್ರಮುಖರು ಇದ್ದರು.