ಗೋಣಿಕೊಪ್ಪ ವರದಿ, ನ. 18: ಕೊಡಗು ಹೆಗ್ಗಡೆ ಸಮಾಜದ ವತಿಯಿಂದ ಬಿಟ್ಟಂಗಾಲದಲ್ಲಿರುವ ಜನಾಂಗದ ಕಚೇರಿಯಲ್ಲಿ ಕಾವೇರಿ ತೀರ್ಥಪೂಜೆ ಆಚರಣೆ ನಡೆಸಲಾಯಿತು.

ನೆಲ್ಲಕ್ಕಿ ಬಾಡೆಯಲ್ಲಿ ದೇವರಿಗೆ ಅಕ್ಕಿ ಹಾಕಿ, ಪ್ರಸಾದ ಅರ್ಪಣೆ ಮಾಡಲಾಯಿತು. ಕಾವೇರಿಗೆ ಪೂಜೆ ಸಲ್ಲಿಸಿ ಬೇಡಿಕೊಳ್ಳಲಾಯಿತು.

ನಂತರ, ಆಡಳಿತ ಮಂಡಳಿ ಸಭೆ ನಡೆಸಲಾಯಿತು. ಮೇ ತಿಂಗಳಿನಲ್ಲಿ ವರ್ಷಂಪ್ರತಿ ನಡೆಸುತ್ತಿದ್ದ ಜನಾಂಗದ ಕ್ರೀಡಾಕೂಟವನ್ನು ಕೊರೊನಾಮುಕ್ತ ವಾತಾವರಣ ಇದ್ದರೆ ಮಾತ್ರ ನಡೆಸುವಂತೆ ನಿರ್ಧರಿಸಲಾಯಿತು. ಡಿಸೆಂಬರ್ ತಿಂಗಳಿನಲ್ಲಿ ಮಹಾಸಭೆ ನಡೆಸಿ, ಮುಂದಿನ ಕಾರ್ಯಕ್ರಮಗಳ ಬಗ್ಗೆ ಯೋಜನೆ ರೂಪಿಸಲು ನಿರ್ಧಾರ ತೆಗೆದುಕೊಳ್ಳಲಾಯಿತು.

ಈ ಸಂದರ್ಭ ಹೆಗ್ಗಡೆ ಸಮಾಜ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ ಮಾತನಾಡಿ, ಕೊಡವ ಭಾಷೆ ಸಂಸ್ಕøತಿ ಪೋಷಣೆಗೆ ಕೊಡವ ಭಾಷೆಯನ್ನಾಡುವ ಜನಾಂಗದವರು ಒತ್ತು ನೀಡಬೇಕಿದೆ. ನಮ್ಮ ಮಂದ್, ಮಾನಿ ಸಂರಕ್ಷಣೆಗೆ ಮುಂದಾಗಬೇಕಿದೆ. ಪಾಶ್ಚಾತ್ಯ ಸಂಸ್ಕøತಿಯನ್ನು ಬಿಟ್ಟು, ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ನಡೆದುಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಉಪಾಧ್ಯಕ್ಷ ಕೊರಕುಟ್ಟೀರ ಸರಾ ಚೆಂಗಪ್ಪ ಮಾತನಾಡಿ, ನಮ್ಮ ಜನಾಂಗದ ಮೇಲೆ ಅಭಿಮಾನ ಇರಬೇಕು. ಬೇರೆ ಸಮಾಜಕ್ಕೂ ಗೌರವ ನೀಡಲು ಮನವಿ ಮಾಡಿಕೊಂಡರು.

ಸಮಾಜದ ಕಾರ್ಯದರ್ಶಿ ಚಂಗಚಂಡ ಕಾವೇರಪ್ಪ, ಖಜಾಂಜಿ ಪಾನಿಕುಟ್ಟೀರ ಕುಟ್ಟಪ್ಪ, ನಿರ್ದೇಶಕರಾದ ಕೊಪ್ಪಡ ಪಳಂಗಪ್ಪ, ಕೊಂಗೇಪಂಡ ರವಿ, ಮೂರೀರ ಕುಶಾಲಪ್ಪ, ಮೂರೀರ ಶಾಂತಿ, ಮಲ್ಲಡ ಸುತಾ, ಪಂದಿಕಂಡ ಸುತಾ, ಕ್ರೀಡಾ ಸಮಿತಿ ಅಧ್ಯಕ್ಷ ಪಡಿಞರಂಡ ಪ್ರಭುಕುಮಾರ್ ಇತರರಿದ್ದರು.