ಸಿದ್ದಾಪುರ, ನ. 18: ಗುಹ್ಯ ಗ್ರಾಮದ ಎ.ಟಿ ಕಾರ್ಯಪ್ಪ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿದ್ದ ಇಂಗುಗುಂಡಿಯಲ್ಲಿ ಸುಮಾರು 8.5 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿದೆ. ಕೂಡಲೇ ತೋಟದ ಕಾರ್ಮಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳೀಯ ಉರಗಪ್ರೇಮಿ ಸುರೇಶ್ ಹಾಗೂ ರಾಜೇಶ್ ಸಹಕಾರದಿಂದ ಹೆಬ್ಬಾವನ್ನು ಗುಂಡಿಯಿಂದ ಮೇಲೆತ್ತಿ ರಕ್ಷಿಸಲಾಯಿತು. ಬಳಿಕ ಹೆಬ್ಬಾವನ್ನು ಮಾಲ್ದಾರೆ ಅರಣ್ಯಕ್ಕೆ ಬಿಡಲಾಯಿತು. ಹೆಬ್ಬಾವು ಅಂದಾಜು 12 ಕೆ.ಜಿ ತೂಕ ಇದೆ ಎಂದು ಅರಣ್ಯ ಇಲಾಖೆಯ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ.

ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಕಳ್ಳಿರ ದೇವಯ್ಯ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿ ಸಂದೀಪ್ ಸೋಮಯ್ಯ, ಅರಣ್ಯ ರಕ್ಷಕ ಚಂದ್ರಹಾಸ್, ಆರ್.ಆರ್.ಟಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.