ಕೂಡಿಗೆ, ನ. 18: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಮುಂಭಾಗದಲ್ಲಿರುವ ಬೃಂದಾವನ ಉದ್ಯಾನಕ್ಕೆ ಸಾರ್ವಜನಿಕರು ತೆರಳಿ ವೀಕ್ಷಣೆ ಮಾಡಲು ಅನುಕೂಲವಾಗುವಂತೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಟಿಕೆಟ್ ಕೌಂಟರ್ ಉದ್ಘಾಟಿಸುವುದರ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿ, ನೀರಾವರಿ ಇಲಾಖೆಯ ಮುಖಾಂತರ ಹಣ ಬಿಡುಗಡೆಯಾಗಿ ಉತ್ತಮವಾದ ಬೃಂದಾವನ ಉದ್ಯಾನ ನಿರ್ಮಾಣ ವಾಗಿದೆ. ಇದರ ವೀಕ್ಷಣೆಯ ಮೂಲಕ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರು ಹಾರಂಗಿಗೆ ಭೇಟಿ ನೀಡಿ ಅಲ್ಲಿನ ಪ್ರಕೃತಿ ಸೌಂದರ್ಯದ ಜೊತೆಗೆ ಅಣೆಕಟ್ಟೆಯಿಂದ ಹೆಚ್ಚುವರಿಯಾಗಿ ಬೀಳುವ ನೀರಿನ ವಿಕ್ಷೇಣೆ ಮತ್ತು ಸಂಗೀತ ಕಾರಂಜಿಯ ವೀಕ್ಷಣೆಯ ಸವಿಯನ್ನು ಅನುಭವಿಸಲು ಸಹಕಾರಿಯಾಗುತ್ತದೆ ಎಂದರು. ಅಲ್ಲದೆ ಜಿಲ್ಲೆಗೆ ರಾಜ್ಯ ಮತ್ತು ಅಂತರ ರಾಜ್ಯಗಳಿಂದ ಹೆಚ್ಚು ಪ್ರವಾಸಿಗರು ಹಾರಂಗಿಗೆ ಬರುತ್ತಿರುವುದರಿಂದ ಹಾರಂಗಿಯಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸಂಗೀತ ಕಾರಂಜಿ ಮತ್ತು ಬೃಂದಾವನ ಅಭಿವೃದ್ಧಿ ವಿವಿಧ ಯೋಜನೆಗಳನ್ನು ರೂಪಿಸಲು ಹೆಚ್ಚು ಅನುದಾನವನ್ನು ಕಾವೇರಿ ನೀರಾವರಿ ನಿಗಮದ ಮೂಲಕ ಜಿಲ್ಲೆಗೆ ತರುವುದರ ಮೂಲಕ ನೂತನ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ಶಾಸಕರು ನಂತರ ಬೃಂದಾವನದ ಆವರಣದಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸಂಗೀತ ಕಾರಂಜಿಗೆ ಚಾಲನೆ ನೀಡಿದರು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹೈಟೆಕ್ ಶೌಚಾಲಯವನ್ನು 15 ದಿನಗಳ ಒಳಗೆ ನಿರ್ಮಾಣ ಮಾಡುವಂತೆ ಸೂಚನೆ ನೀಡಿದರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಆರ್. ಮಂಜುಳ, ಕುಶಾಲನಗರ ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ಕುಮಾರಪ್ಪ, ನೀರಾವರಿ ಇಲಾಖೆಯ ಅಭಿಯಂತರ ಚಂದ್ರಶೇಖರ, ಕಾರ್ಯಪಾಲಕ ಅಭಿಯಂತರ ರಾಜೇಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರಕುಮಾರ, ಇಂಜಿನಿಯರ್ ನಾಗರಾಜ್ ಸೇರಿದಂತೆ ಬಿ.ಜೆ.ಪಿ. ಪಕ್ಷದ ತಾಲೂಕು ಮಟ್ಟದ ವಿವಿಧ ಘಟಕಗಳ ಅಧ್ಯಕ್ಷರು, ಮಹಿಳಾ ಘಟಕದ ಪದಾಧಿಕಾರಿಗಳು ಹಾಗೂ ಕೂಡಿಗೆ-ಕೂಡುಮಂಗಳೂರು ಶಕ್ತಿ ಬೂತ್ ಸಮಿತಿಯ ಅಧ್ಯಕ್ಷರು ಹಾಗೂ ಇತರರು ಹಾಜರಿದ್ದರು.