ಮಡಿಕೇರಿ, ನ. 18: ಗುಜರಾತ್ನ ಸೂರತ್ ನಗರದ ಬಿಜೆಪಿ ಮುಖಂಡ ಹಾಗೂ ಮಾಜಿ ಐ.ಟಿ. ಅಧಿಕಾರಿ ಪಿ.ವಿ.ಎಸ್. ಶರ್ಮಾ ಎಂಬವರು ನಡೆಸಿದ್ದಾರೆ ಎನ್ನಲಾಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಸೂರತ್ನಲ್ಲಿ ಆದಾಯ ತೆರಿಗೆ ಇಲಾಖಾ ಆಯುಕ್ತರಾಗಿ ಕೆಲಸ ನಿರ್ವಹಿಸುತ್ತಿರುವ ಕೊಡಗು ಜಿಲ್ಲೆಯವರಾದ ಡಾ. ಕೊಟ್ಟಂಗಡ ಡಿ. ಪೆಮ್ಮಯ್ಯ ಅವರು ಪ್ರಕರಣ ದಾಖಲು ಮಾಡಿದ್ದಾರೆ. ಈ ಬಗ್ಗೆ ಇದೀಗ ಐ.ಟಿ. ತನಿಖೆ ಮುಂದುವರಿಯುತ್ತಿದೆ.ಫೋರ್ಜರಿ ಹಾಗೂ ವಂಚನೆ ಆರೋಪದಂತೆ ಪ್ರಕರಣ ಇವರ ಮೇಲಿದೆ. ಎರಡು ಪತ್ರಿಕೆಗಳಿಗೆ ಸರಕಾರದ ಜಾಹೀರಾತು ಹಾಗೂ ಖಾಸಗಿ ಜಾಹೀರಾತು ಹೆಚ್ಚಾಗಿ ಸಿಗಲು ಅವರು ಆ ಪತ್ರಿಕೆಗಳಿಗೆ ಅತ್ಯಧಿಕ ಪ್ರಸಾರವಿರುವಂತೆ ದಾಖಲೆ ತೋರಿಸುವಲ್ಲಿ ಇವರ ಪಾತ್ರ ಇದೆ. ಅಲ್ಲದೆ, ಶರ್ಮಾ ಅವರು ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಭಾರೀ ಹಣಕಾಸಿನ ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪವಿದೆ. ಚಿನ್ನಾಭರಣ ವ್ಯಾಪಾರಿಗಳು ಹಾಗೂ ಐ.ಟಿ. ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವಿದೆ.
ಇದಾದ ಬಳಿಕ ಅವರ ಮನೆ- ಕಚೇರಿ ಮೇಲೆ ಐ.ಟಿ. ದಾಳಿ ನಡೆಸಿದ್ದನ್ನೂ ಉಲ್ಲೇಖಿಸಲಾಗಿದೆ. ಇದೀಗ ಮತ್ತೆ ತೆರಿಗೆ ಆಯುಕ್ತರಾದ ಪೆಮ್ಮಯ್ಯ ಅವರು ದಾಖಲಿಸಿರುವ ಪ್ರಕರಣದಂತೆ ಶರ್ಮಾ ಹಾಗೂ ಅವರ ಪಾಲುದಾರ ಸೀತಾರಾಮ್ ಅಡುಕಿಯಾ ವಿರುದ್ಧ ಭಾರತೀಯ ದಂಡ ಸಂಹಿತೆ 465 (ಫೋರ್ಜರಿ) 468, 471 (ನಕಲಿ ದಾಖಲೆ ಸೃಷ್ಟಿ) ಹಾಗೂ 420 (ವಂಚನೆ) ಆರೋಪದಂತೆ ಪೊಲೀಸ್ ಮೊಕದ್ದಮೆ ಹೂಡಲಾಗಿದೆ.
ಶರ್ಮಾ ಮನೆ ಹಾಗೂ ಕಚೇರಿ ಮೇಲೆ ಐ.ಟಿ. ಅಧಿಕಾರಿಗಳ ಹಲವು ತಂಡ ಇತ್ತೀಚೆಗೆ ದಾಳಿ ನಡೆಸಿದ್ದು, ಹಲವು ದಾಖಲೆ ಗುಜರಾತಿ ಹಾಗೂ ಆಂಗ್ಲ ಭಾಷಾ ಪತ್ರಿಕೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಧಾನಿ ಮೋದಿ ಅವರ ರಾಜ್ಯವಾದ ಗುಜರಾತ್ನ ಸೂರತ್ನಲ್ಲಿ ಕೊಡಗಿನವರಾದ ಯುವ ಅಧಿಕಾರಿ ಕೊಟ್ಟಂಗಡ ಪೆಮ್ಮಯ್ಯ ಎಫ್.ಐ.ಆರ್. ದಾಖಲಿಸಿ ತನಿಖೆ ನಡೆಸುತ್ತಿರುವ ಈ ಪ್ರಕರಣ ಗಮನ ಸೆಳೆದಿದೆ.