ಕೂಡಿಗೆ, ನ. 18: ಹಾರಂಗಿ ಜಲಾಶಯ ಪೂರ್ಣವಾಗಿ ಭರ್ತಿಯಾದ ಸಂದರ್ಭ ಹೆಚ್ಚುವರಿಯಾಗಿ ಬರುವ ನೀರನ್ನು ನದಿಗೆ ಹರಿಸಲಾಗುತ್ತದೆ. ಈ ಸಂದರ್ಭ ನದಿಯ ಆಸುಪಾಸಿನಲ್ಲಿ ಕೆಲ ಸ್ಥಳಗಳಿಗೆ ಹಾರಂಗಿ ನದಿಯ ನೀರು ನುಗ್ಗಿ ಭಾರೀ ಅನಾಹುತಕ್ಕೆ ಕಾರಣವಾಗಿತ್ತು. ಅನಾಹುತಗಳ ಸ್ಥಳ ಪರಿಶೀಲನೆ ಮಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕಾವೇರಿ ನೀರಾವರಿ ನಿಗಮದ ಹಾರಂಗಿ ವೃತ್ತ ಅಧಿಕಾರಿಗಳಿಗೆ ತಡೆಗೋಡೆ ನಿರ್ಮಾಣ ಮಾಡಲು ಕ್ರಿಯಾ ಯೋಜನೆ ತಯಾರಿಸುವಂತೆ ಸೂಚನೆ ನೀಡಿದ್ದರು. ಅದರಂತೆ ಈಗಾಗಲೇ ನೀರಾವರಿ ಇಲಾಖೆಯ ವತಿಯಿಂದ ರೂ. 50 ಕೋಟಿ ವೆಚ್ಚದ ಕಾಮಗಾರಿಗೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಕಳೆದ ಎರಡು ವರ್ಷಗಳಿಂದ ಹಾರಂಗಿಯ ಅಣೆಕಟ್ಟೆಯಿಂದ ಹೆಚ್ಚುವರಿ ನೀರಿನ್ನು ನದಿಗೆ ಹರಿಸಲಾಗುತ್ತಿದೆ. ಈ ಸಂದರ್ಭ ಕೂಡಿಗೆಯ ಪ್ರಮುಖ ವಿದ್ಯಾಸಂಸ್ಥೆಯಾದ ಕೊಡಗು ಸೈನಿಕ ಶಾಲೆ ಆವರಣದವರೆಗೆ ನೀರು ನುಗ್ಗಿದೆ. ಅಲ್ಲದೆ ಹಾರಂಗಿಯ ನದಿ ದಂಡೆಯ ಪಕ್ಕದ ರೇಷ್ಮೆ ಇಲಾಖೆಯ ಕೃಷಿ ಕ್ಷೇತ್ರದ ಆವರಣದಲ್ಲಿ ಮೊರಾರ್ಜಿ ಆಂಗ್ಲ ಮಾಧ್ಯಮ ವಸತಿ ಶಾಲೆಯ ಆವರಣಕ್ಕೂ ನೀರು ನುಗ್ಗಿ ಭಾರೀ ನಷ್ಟವಾಗಿತ್ತು.

ಈ ವಿಷಯವಾಗಿ ಸೈನಿಕ ಶಾಲೆಯವರು ಕೇಂದ್ರ ಸರಕಾರಕ್ಕೆ ಮತ್ತು ರಾಜ್ಯ ಸರ್ಕಾರಕ್ಕೆ ಮತ್ತು ಕ್ಷೇತ್ರದ ಶಾಸಕರಿಗೆ ಪತ್ರ ಬರೆದಿದ್ದು, ಅದರ ಮೇರೆಗೆ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಹಾರಂಗಿಯ ಕೆಲ ಪ್ರದೇಶಗಳು, ಕೂಡಿಗೆಯ ಸೈನಿಕ ಶಾಲೆಯ ಹತ್ತಿರ, ಮೊರಾರ್ಜಿ ಶಾಲೆಯ ಹತ್ತಿರ ನದಿಗೆ ತಡೆಗೋಡೆ ನಿರ್ಮಾಣ ಮಾಡುವಂತೆ ತಿಳಿಸಿ ಕಾಮಗಾರಿಗೆ ರೂ. 50 ಕೋಟಿಯ ಕ್ರಿಯಾ ಯೋಜನೆ ಪ್ರಸ್ತಾವನೆಯನ್ನು ಸರಕಾರಕ್ಕೆ ನೀರಾವರಿ ಇಲಾಖೆಯ ಮೂಲಕ ಕಳುಹಿಸಲಾಗಿದೆ.

ಮುಂದಿನ ದಿನಗಳಲ್ಲಿ ನೀರಾವರಿ ಸಚಿವರೊಂದಿಗೆ ಚರ್ಚಿಸಿ ಶೀಘ್ರವಾಗಿ ಹಣ ಬಿಡುಗಡೆ ಮಾಡಿ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ.

ಈ ಸಂದರ್ಭ ಕಾವೇರಿ ನೀರಾವರಿ ನಿಗಮದ ಹಾರಂಗಿ ವೃತ್ತದ ಅಧೀಕ್ಷ ಚನ್ನಕೇಶವ, ಕಾರ್ಯಪಾಲಕ ಅಭಿಯಂತರ ರಾಜೇಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರಕುಮಾರ, ಇಂಜಿನಿಯರ್ ನಾಗರಾಜ್ ಇದ್ದರು.