ಪೆರಾಜೆ, ನ. 18 : ರೈತರು ಸೇರಿದಂತೆ ಗ್ರಾಮದ ಸರ್ವತೋಮುಖ ಉದ್ದಾರವನ್ನು ಬಯಸಿದರೆ ಮಾತ್ರ ಆ ಗ್ರಾಮದ ಅಭಿವೃದ್ಧಿ ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ಸಹಕಾರಿ ಸಂಘಗಳು ಕೆಲಸ ನಿರ್ವಹಿಸಬೇಕಿದೆ, ಮುಖ್ಯವಾಗಿ ಕೃಷಿಕರಿಗೆ ಸವಲತ್ತುಗಳನ್ನು ಕೊಡುವುದರ ಜೊತೆಗೆ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಆಗಬೇಕಿದೆ ಈ ನಿಟ್ಟಿನಲ್ಲಿ ಸಹಕಾರಿ ಸಂಘಗಳು ಚಿಂತನೆ ಮಾಡಬೇಕು ಎಂದು ಸಹಕಾರ ಸಂಘಗಳ ಉಪನಿಬಂಧಕ ಬಿ.ಕೆ ಸಲೀಂ ಅಭಿಪ್ರಾಯಪಟ್ಟರು,
ಪೆರಾಜೆಯ ಅನ್ನಪೂರ್ಣೇಶ್ವರಿ ಕಲಾಮಂದಿರದ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಜಿಲ್ಲಾ ಸಹಕಾರ ಇಲಾಖೆ ಮತ್ತು ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ ಅಂಗವಾಗಿ ವ್ಯವಹಾರ, ಉದ್ಯೋಗ ಕಳೆದುಕೊಂಡವರು, ಬಾಧಿತರು ಪುನರುದ್ಯೋಗಸ್ಥರಾಗಲು ಕೌಶಲ್ಯಾಭಿವೃದ್ಧಿ ದಿನಾಚರಣೆ ಪ್ರಯುಕ್ತ ಮುಖ್ಯ ಅತಿಥಿಯಾಗಿ ಮಾತನಾಡಿದರು. 25 ವರ್ಷಗಳ ಹಿಂದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಬಳಿ ಒಂದು ಗ್ರಾಮದ ರೈತರ ಸಂಪೂರ್ಣ ಮಾಹಿತಿಗಳು ಇದ್ದವು ಆದರೆ ಇಂದು ಆ ಮಾಹಿತಿ ಕಾಣಸಿಗುವುದಿಲ್ಲ , ರೈತರ ಸಮಸ್ಯೆಗಳನ್ನು ಕಂಡುಹಿಡಿದು ಅದನ್ನು ಪರಿಹರಿಸಲು ಸಂಘಗಳು ಕೈ ಜೋಡಿಸಬೇಕು ಎಂದರು. ಇದೇ ಸಂದರ್ಭ ಸರ್ಕಾರ ರೈತರಿಗಾಗಿ ತಂದ ಸಾಲ ಸೌಲಭ್ಯ ಗಳು ಸೇರಿದಂತೆ ಹಲವು ಯೋಜನೆಗಳನ್ನು ವಿವರವಾಗಿ ತಿಳಿಸಿದರು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ಅಧ್ಯಕ್ಷರಾದ ಕೊಡಂದೇರ ಪಿ. ಬಾಂಡ್ ಗಣಪತಿ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿ ಕೊಡಗಿನಂತಹ ಪುಟ್ಟ ಜಿಲ್ಲೆಯಲ್ಲಿ ನೂರು ವರ್ಷಗಳ ಹಿಂದೆ ಪ್ರಾರಂಭಿಸಿದ ಸಹಕಾರ ಸಂಘಗಳು ಕೊಡಗಿನ ಕಾಫಿ,ಏಲಕ್ಕಿ, ಕಿತ್ತಳೆ ಸೇರಿದಂತೆ ಅನೇಕ ಬೆಳೆಗಳಿಗೆ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ನಮ್ಮ ಹಿಂದಿನ ಹಿರಿಯರು ದೂರ ದೃಷ್ಟಿಯಿಂದ ಅಡಿಗಲ್ಲು ಹಾಕಿದ್ದಾರೆ, ಇಂದು ರೈತರಿಗೆ ಉತ್ಪನ್ನ ಶೇಖರಿಸಲು ಗೋದಾಮು ಸೇರಿದಂತೆ ರೈತರಿಗೆ ಪರಿಕರ,ಗೊಬ್ಬರಗಳನ್ನು ನೀಡುವುದರ ಜೊತೆಗೆ ವಾಣಿಜ್ಯ, ಖಾಸಗಿ ಬ್ಯಾಂಕುಗಳಿಗೆ ಪೈಪೆÇೀಟಿ ನೀಡುವಷ್ಟು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಮಹತ್ವದ ಕುರಿತು ಮಾತನಾಡಿದ ಸುಳ್ಯದ ನಿವೃತ್ತ ಕೈಗಾರಿಕಾ ವಿಸ್ತರಣಾಧಿಕಾರಿ ವೀರಪ್ಪ ಗೌಡ ಮಾತನಾಡಿ ನಮ್ಮ ಬದುಕು ಪೇಟೆ ಪಟ್ಟಣಗಳಲ್ಲಿ ಇಲ್ಲ ಬದಲಾಗಿ ಗ್ರಾಮ ಹಳ್ಳಿ ಪ್ರದೇಶಗಳಲ್ಲಿ ಇದೆ, ಪ್ರಸ್ತುತ ಕಾಲಘಟ್ಟದಲ್ಲಿ ಸುಂದರ ಬದುಕನ್ನು ಹಳ್ಳಿಯಲ್ಲಿ ಮಾಡುವ ಅನಿವಾರ್ಯತೆ ಇದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಅಪ್ಪಚಟ್ಟೋಳಂಡ ಮನು ಮುತ್ತಪ್ಪ ಮಾತನಾಡಿ, ನಮ್ಮ ದೇಶದಲ್ಲಿ 1905ರಲ್ಲಿ ಅಧಿಕೃತವಾಗಿ ಜಾರಿಗೆ ಬಂದಿರುವ ಸಹಕಾರಿ ಸಂಘಗಳು ನಂತರದ ದಿನಗಳಲ್ಲಿ ರೈತರ ಅನುಕೂಲಕ್ಕೆ ತಕ್ಕಂತೆ ಕೆಲವೊಂದು ಕಾಯಿದೆಗಳನ್ನು ಬದಲಾಯಿಸಲಾಗಿದೆ. ಸಹಕಾರಿ ಸಂಘಗಳ ಜೊತೆಗೆ ಸದಸ್ಯರು ಒಡನಾಟಗಳನ್ನು ಇಟ್ಟುಕೊಳ್ಳುವ ಅನಿವಾರ್ಯತೆ ಇದೆ ಎಂದರು.
ಅತಿಥಿಗಳಾಗಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ಜಿಲ್ಲಾ ಸಹಕಾರ ಯೂನಿಯನ್ನ ಉಪಾಧ್ಯಕ್ಷ ಪಟ್ಟಡ ಸಿ. ಮನು ರಾಮಚಂದ್ರ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ ನಿರ್ದೇಶಕರುಗಳಾದ ಹೊಸೂರು ಜೆ. ಸತೀಶ್ ಕುಮಾರ್, ಕಿಮ್ಮುಡಿರ ಜಗದೀಶ್, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಇದರ ನಿರ್ದೇಶಕರುಗಳಾದ ಬಿದ್ದಾಟಂಡ ರಮೇಶ್ ಚಂಗಪ್ಪ, ಕೊಡಪಾಲು ಎಸ್ ಗಣಪತಿ, ಕೋಡಿರ ಎಂ ತಮ್ಮಯ್ಯ, ವಾಂಚಿರ ಅಜಯ್ಕುಮಾರ್, ಸಂಪಾಜೆ ಪಯಸ್ವಿನಿ ಕೃ.ಪ.ಸ.ಸಂಘದ ಅಧ್ಯಕ್ಷ ನಿಡುಂಜಿ.ಸಿ.ಅನಂತ ಪೆರಾಜೆ ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷರಾದ ನಿಡ್ಯಮಲೆ. ಬಿ. ಮೋನಪ್ಪ ಮತ್ತಿತರರು ಹಾಜರಿದ್ದರು
ಪೆರಾಜೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರೂ ಹಾಗೂ ಮಡಿಕೇರಿ ತಾ.ಪಂ ಸದಸ್ಯ ನಾಗೇಶ್ ಕುಂದಲ್ಪಾಡಿ ಪ್ರ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಜಿಲ್ಲಾ ಸಹಕಾರ ಯೂನಿಯನ್ ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಯೋಗೇಂದ್ರ ನಾಯಕ್ ಪ್ರಾರ್ಥಿಸಿ, ನಿರೂಪಿಸಿದರು, ಪ್ರಾ.ಕೃ.ಪ.ಸ.ಸಂಘ ಪೆರಾಜೆ ಇದರ ಕಾರ್ಯ ನಿರ್ವಹಣಾಧಿಕಾರಿ ಲೋಕೇಶ್ ಹೊದ್ದೆಟ್ಟಿ ಕಾರ್ಯಕ್ರಮವನ್ನು ವಂದಿಸಿದರು.
- ಕಿರಣ್ ಕುಂಬಳಚೇರಿ