ಮಡಿಕೇರಿ, ನ. 18: ಕಸದ ಸಮಸ್ಯೆ ಕೊಡಗಿನಲ್ಲಿ ಹೆಚ್ಚುತ್ತಿದ್ದಂತೆಯೇ, ಇದರ ಬಗ್ಗೆ ಕೊಡಗಿನವರು ಜಾಗೃತರಾಗುತ್ತಿದ್ದಾರೆ. ಇತ್ತೀಚೆಗೆ ರಸ್ತೆಯಲ್ಲಿ ಕಸ ಎಸೆಯುವವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲ್ಲಿ ಕಿರಿದಾದ ಯುದ್ಧವೇ ಕೊಡಗಿನಲ್ಲಿ ಪ್ರಾರಂಭವಾಗಿದೆ. ಇದರಿಂದಾಗಿ ಸೂಕ್ತ ಅರಿವಿನೆಡೆಗೆ ಒಂದು ಉತ್ತಮ ಹಾದಿಯಾಗಿ ಪರಿವರ್ತಿತವಾಗಿದೆ ಎನ್ನಬಹುದು. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ, ದಕ್ಷಿಣ ಕೊಡಗಿನ ದೇವರಪುರ ಗ್ರಾಮ ಒಂದು ಆದರ್ಶ ಗ್ರಾಮವಾಗಿ ಬೆಳೆಯುತ್ತಿದೆ ಈ ಪುಟ್ಟ ಗ್ರಾಮದಲ್ಲಿ ಕಸ ವಿಲೇವಾರಿ ಘಟಕ ಹಾಗೂ ಸಾರ್ವಜನಿಕ ಕಸದ ಬುಟ್ಟಿಗಳಿವೆ. ಅಲ್ಲದೆ, ಇಲ್ಲಿಯ ಜನರು ವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆಯನ್ನು ಅನುಸರಿಸುತ್ತಿದ್ದಾರೆ. ರಂಗುರಂಗಿನ ಮೂರು ಕಸದ ತೊಟ್ಟಿಗಳು ವೀರಾಜಪೇಟೆ-ಮೈಸೂರು ಹೆದ್ದಾರಿಯಲ್ಲಿ ಸಾರ್ವಜನಿಕರ ಕಣ್ಣ ಸೆಳೆಯುತ್ತವೆ. ಜಾಗೃತಿ ಫಲಕಗಳಲ್ಲದೆ, ಈ ಕಸದ ತೊಟ್ಟಿಗಳ ಜಾಗದಲ್ಲಿ ಒಂದು ‘ಸೆಲ್ಫಿ ಸ್ಪಾಟ್’ ಕೂಡ ಇದೆ. ದೇವರಪುರದ ನಾಗರಿಕರೆಲ್ಲರೂ ಹಣ ಸಂಗ್ರಹಿಸಿ, ದೇವರಪುರÀ ಪಂಚಾಯಿತಿ ಮೂಲಕ ಬಾವಿ ನಿರ್ಮಾಣಕ್ಕೆ ಅಗತ್ಯವಾದ ರಿಂಗ್‍ಗಳನ್ನು ಪಡೆದು, ಸುಮಾರು ನಾಲ್ಕು ವರ್ಷಗಳ ಹಿಂದೆ ಈ ಸಾರ್ವಜನಿಕ ತೊಟ್ಟಿಗಳನ್ನು ಹೆದ್ದಾರಿಯ ಬದಿಯಲ್ಲಿ ಅಳವಡಿಸಿದರು.ಇಲ್ಲಿಯ ನಾಗರಿಕರೆಲ್ಲರೂ ಒಗ್ಗಟ್ಟಿನಿಂದ ಈ ಕೆಲಸಕ್ಕೆ ಕೈ ಜೋಡಿಸಿರುವರಾದರೂ, ಗ್ರಾಮದ ಯುವಕರಾದ ಕೋದಂಡ ಎ. ಬೋಪಯ್ಯ, ಅನ್‍ಷದ್, ಎ. ಸುಬ್ಬಯ್ಯ ಹಾಗೂ ಸಜಿತ್ ಈ ಗ್ರಾಮದಲ್ಲಿ ಸ್ವಚ್ಛತೆಯ ಆಂದೋಲನವನ್ನು ಪ್ರಾರಂಭಿಸಿದುದು ಗಮನಾರ್ಹ. ಪ್ಲಾಸ್ಟಿಕ್ ಕಸ, ಗಾಜಿನ ಕಸ ಹಾಗೂ ಒಣಗಿದ ಕಸ ಹಾಕಲು ಮೂರು ತೊಟ್ಟಿಗಳು ಹೆದ್ದಾರಿಯ ಬಳಿಯೇ ಇದ್ದು, ಮೊದಲು ಈ ತೊಟ್ಟಿಗಳನ್ನು ಕೆಲವು ಯುವಕರೇ ಸ್ವಚ್ಛ ಮಾಡುತ್ತಿದ್ದರು.
ಇದೀಗ, ಈ ಕೆಲಸಕ್ಕೆ ಒಬ್ಬ ಕಾರ್ಮಿಕನನ್ನು ನೇಮಕ ಮಾಡಿದ್ದು, ಇವರಿಗೆ ಸಂಬಳವನ್ನು ಪಂಚಾಯಿತಿ ಯಿಂದ ನೀಡಲಾಗುತ್ತಿದೆ.
ನಾವು ‘ಕ್ಲೀನ್ ಕೂರ್ಗ್ ಇನಿಶಿಯೇಟಿವ್’ ಸಂಸ್ಥೆಯೊಂದಿಗೆ ದೇವರಪುರದಲ್ಲಿ ಸ್ವಚ್ಛತೆಯ ಆಂದೋಲನವನ್ನು ಪ್ರಾರಂಭಿಸಿದೆವು. ಪಂಚಾಯಿತಿಯ ಸಹಾಯ ಪಡೆದು, ನಾಕರಿಕರನ್ನು ಒಂದುಗೂಡಿಸಿ ಈವರೆಗೆ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಗ್ರಾಮದಲ್ಲಿ ಹಮ್ಮಿಕೊಂಡಿದ್ದೇವೆ ಎಂದು ಬೋಪಯ್ಯ ‘ಶಕ್ತಿ’ಗೆ ತಿಳಿಸಿದರು.
ಆದರೆ, ಕೇವಲ ಜಾಗೃತಿ ಕಾರ್ಯಕ್ರಮಗಳಿಗೆ ಇವರ ಪ್ರಯತ್ನ ಸೀಮಿತವಾಗಿಲ್ಲ. ಇಲ್ಲಿನ ಜಾಗೃತ ಯುವಕರ ಪ್ರಯತ್ನದಿಂದ ಈ ಗ್ರಾಮದಲ್ಲಿ ಒಂದು ಸುಸಜ್ಜಿತ ಕಸ ವಿಲೇವಾರಿ ಘಟಕವೂ ಸ್ಥಾಪನೆಗೊಳ್ಳುವಂತಾಗಿದೆ. ಕೇಂದ್ರದಿಂದ ಸ್ವಚ್ಛ ಭಾರತ್ ಮಿಶನ್‍ನಿಂದ ಕೆಲವು ಅಧಿಕಾರಿಗಳು ಈ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭ ಇಲ್ಲಿನ ಯುವಕರು ಅಧಿಕಾರಿಗಳಿಗೆ ಗ್ರಾಮ ಪಂಚಾಯಿತಿಯ ಹಳೆಯ ಕಟ್ಟಡದಲ್ಲಿ ಕಸ
(ಮೊದಲ ಪುಟದಿಂದ) ವಿಲೇವಾರಿ ಘಟಕವನ್ನು ಸ್ಥಾಪಿಸುವಂತೆ ಕೋರಿದರು. ಆದರೆ, ಈ ಕಟ್ಟಡ ದುರ್ಬಲವಾಗಿದ್ದರಿಂದ ಅಧಿಕಾರಿಗಳು ಕಸವಿಲೇವಾರಿ ಘಟಕವನ್ನು ಸ್ಥಾಪಿಸುವಲ್ಲಿ ಹಿಂಜರಿದರು. ಇದನ್ನು ಅರಿತ ಯುವಕರು, ಈ ದುರ್ಬಲ ಕಟ್ಟಡದ ದುರಸ್ತಿ ಕಾರ್ಯದಲ್ಲಿ ತೊಡಗಿದರು. ಕೇವಲ 48 ಗಂಟೆಗಳಲ್ಲಿ, ತಮ್ಮದೇ ಹಣ ಉಪಯೋಗಿಸಿ ಈ Pಟ್ಟಡವನ್ನು ದುರಸ್ತಿಗೊಳಿಸಿದರಲ್ಲದೆ, ಕಟ್ಟಡವನ್ನು ಸುಂದರಗೊಳಿಸಿದರು. ಇಂದು, ದೇವರಪುರದ ಈ ಕಸ ವಿಲೇವಾರಿ ಘಟಕದಲ್ಲಿ 12 ಪ್ರತ್ಯೇಕ ವಿಲೇವಾರಿ ತೊಟ್ಟಿಗಳಿವೆಯಲ್ಲದೆ, ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಕಸದಿಂದ ಸುಮಾರು ರೂ. 15,000 ಆದಾಯ ಉತ್ಪಾದಿಸಿದೆ.
ಇನ್ನು, ದೇವರಪುರದ ಮಹಿಳೆಯರು ಹಾಗೂ ಶಾಲಾ ವಿದ್ಯಾರ್ಥಿಗಳು ಗ್ರಾಮದ ಸ್ವಚ್ಛತಾ ಆಂದೋಲನದ ಬೆನ್ನೆಲುಬಾಗಿದ್ದಾರೆ. ಇಲ್ಲಿಯ ಶಾಲೆಯ ಮಕ್ಕಳು ಉತ್ಸಾಹದಿಂದ ಜಾಗೃತಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. “ದೇವರಪುರದ ರಾಜೇಶ್ವರಿ ಶಾಲೆಯಲ್ಲಿ ಬಡಕುಟುಂಬದ ಮಕ್ಕಳಿಗೆ ಅತೀ ಕಡಿಮೆ ಶುಲ್ಕದಲ್ಲಿ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಇಲ್ಲಿಯ ವಿದ್ಯಾರ್ಥಿಗಳು ಹಾಗೂ ಕಾಲ್ಸ್ ಸಂಸ್ಥೆಯ ವಿದ್ಯಾರ್ಥಿಗಳು ಸೇರಿ ಬಟ್ಟೆ ಚೀಲಗಳ ಮೇಲೆ ಕಲೆಯನ್ನು ರಚಿಸಿ, ಅವುಗಳಿಂದ ಬಂದ ಆದಾಯ ದೊಂದಿಗೆ ರಾಜೇಶ್ವರಿ ಶಾಲೆಗೆ 100 ಪ್ಲೇಟ್‍ಗಳನ್ನು ದಾನಮಾಡಿರುತ್ತಾರೆ. ಇನ್ನು, ಗ್ರಾಮಸ್ಥರೆಲ್ಲರೂ ಸೇರಿ ಇಲ್ಲಿಯ ವಿಶೇಷ ಮಕ್ಕಳ ಶಾಲೆಯೊಂದಕ್ಕೆ ಹಣ ಕೂಡಿಸಿ ಮಕ್ಕಳಿಗೆ ಬೆಡ್‍ಗಳನ್ನು ದಾನಮಾಡಿರುತ್ತಾರೆ,” ಎಂದು ಬೋಪಯ್ಯ ತಿಳಿಸಿದರು.
ಈ ಗ್ರಾಮದ ವಿಶೇಷÀತೆಯೆಂದರೆ, ಇಲ್ಲಿ ಗ್ರಾಮಸ್ಥರೆಲ್ಲರೂ ವಾರಕ್ಕೊಮ್ಮೆ ಒಂದು ಕಡೆ ಸೇರಿ, ಮುಂದಾಗ ಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸುತ್ತಾರೆ. ಗ್ರಾಮದಲ್ಲಿ ತಾವು ನೋಡಬಯಸುವ ಬದಲಾವಣೆಗಳನ್ನು ಗ್ರಾಮಸ್ಥರೆಲ್ಲರೂ ಸೇರಿ ಸ್ವತಃ ಬದಲಾವಣೆಗಳನ್ನು ತರುತ್ತಿರುವದು ಈ ಕೊಡಗಿನ ಪುಟ್ಟ ಗ್ರಾಮದ ವಿಶೇಷÀತೆಯಾಗಿದೆ. ಇತರ ಗ್ರಾಮಗಳಿಗೂ ಈ ಪರಿವರ್ತನೆ ಮಾದರಿಯಾಗಬಲ್ಲದು.
-ಪ್ರಜ್ಞಾ ಜಿ.ಆರ್.