ಕಣಿವೆ, ನ. 18: ಮೈಸೂರು ಮಡಿಕೇರಿ ಹೆದ್ದಾರಿಯ ಆನೆಕಾಡು ಅರಣ್ಯದಂಚಿನಲ್ಲಿ ರಸ್ತೆಹೋಕರು ಬಳಸಿ ಬಿಸಾಕುವ ಪ್ಲಾಸ್ಟಿಕ್ ಮೊದಲಾದ ತ್ಯಾಜ್ಯಗಳನ್ನು ಅರಣ್ಯ ಸಿಬ್ಬಂದಿ ತೆರವುಗೊಳಿಸಿ ಸ್ವಚ್ಛಗೊಳಿಸುತ್ತಿದ್ದ ಚಿತ್ರಣ ಬುಧವಾರ ಕಂಡು ಬಂತು.
ರಾಷ್ಟ್ರೀಯ ಹೆದ್ದಾರಿಯ ಈ ಅರಣ್ಯದ ಆಸುಪಾಸಿನಲ್ಲಿ ಯಾವುದೇ ವಾಹನಗಳ ನಿಲುಗಡೆಗೆ ನಿಷೇಧ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಿಸಾಕಬೇಡಿ, ಸ್ವಚ್ಛತೆ ಕಾಪಾಡಿ, ವನ್ಯ ಜೀವಿಗಳನ್ನು ಸಂರಕ್ಷಿಸಿ ಎಂಬಿತ್ಯಾದಿ ಮಾಹಿತಿಗಳ ನಾಮಫಲಕಗಳನ್ನು ಅಲ್ಲಲ್ಲಿ ಅಳವಡಿಸಿದ್ದರೂ ಕೂಡ, ಪ್ರವಾಸಿ ವಾಹನಗಳಲ್ಲಿ ಸಂಚರಿಸುವ ಮಂದಿ ಇದ್ಯಾವುದನ್ನು ಲೆಕ್ಕಿಸದೇ ತಮ್ಮಷ್ಟಕ್ಕೆ ತಾವು ಕಸ ತ್ಯಾಜ್ಯ ಹಾಗೂ ಪ್ಲಾಸ್ಟಿಕ್ಗಳನ್ನು ಬಿಸಾಡುತ್ತಿರುವುದ ರಿಂದ ಬೇಸತ್ತ ಅರಣ್ಯಾಧಿಕಾರಿಗಳು ಸಿಬ್ಬಂದಿಗಳನ್ನು ಬಿಟ್ಟು ಹೆದ್ದಾರಿ ಬದಿಯ ಸ್ವಚ್ಛತೆಗೆ ಮುಂದಾಗಿದ್ದಾರೆ.
ಹೆದ್ದಾರಿ ಬದಿಯಲ್ಲಿ ಬಿಸಾಕುವ ನೀರಿನ ಪ್ಲಾಸ್ಟಿಕ್ ಬಾಟಲಿಗಳು, ಬೇಕರಿ ತಿನಿಸುಗಳ ಕವರ್ಗಳು, ಊಟ ತಿಂಡಿ ಮಾಡಿ ಬಿಸಾಕುವ ಪ್ಲಾಸ್ಟಿಕ್ ತಟ್ಟೆಗಳನ್ನು ಸಿಬ್ಬಂದಿ ಒಂದೆಡೆ ಕಲೆ ಹಾಕಿ ಬೆಂಕಿ ಹಚ್ಚುತ್ತಿದ್ದದು ಗೋಚರಿಸಿತು.
ಸಾರ್ವಜನಿಕರಾಗಲೀ ಹಾಗೂ ಪ್ರವಾಸಿಗರಾಗಲೀ ಕೊಡಗು ಪ್ರವೇಶಿಸುವಾಗ ಕೊಡಗು ಪ್ರವೇಶದ್ವಾರದ ಕುಶಾಲನಗರದ ಕಾವೇರಿ ಸೇತುವೆ ಬಳಿ ಸ್ವಚ್ಛ ಕೊಡಗು ನಿರ್ಮಾಣಕ್ಕಾಗಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆಯಬೇಡಿ ಎಂಬ ನಾಮಫಲಕಗಳನ್ನು ನೋಡಿಯೇ ಜಿಲ್ಲೆಗೆ ಪ್ರವೇಶಿಸುತ್ತಿದ್ದಾರೆ. ಆದರೂ ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಅರಣ್ಯ, ಪ್ರವಾಸಿ ಹಾಗೂ ಪರಿಸರ ಇಲಾಖೆಗಳು ಮುಂದಾಗಬೇಕಿದೆ.
ಸ್ಥಳೀಯ ಗ್ರಾಮಾಡಳಿತಗಳು ಕೂಡ ಸ್ವಚ್ಛತೆಯ ವಿಚಾರದಲ್ಲಿ ವಿಶೇಷ ಆಸಕ್ತಿ ತೋರಬೇಕಿದೆ.
ಆನೆಕಾಡು ಅರಣ್ಯದಂಚಿನಲ್ಲಿ ಬಿಸಾಕುವ ಪ್ಲಾಸ್ಟಿಕ್ ತ್ಯಾಜ್ಯಗಳು ಅರಣ್ಯದೊಳಗೆ ಗಾಳಿಯಲ್ಲಿ ಸಾಗಿದಾಗ ಅವುಗಳನ್ನು ತಿನ್ನುವ ವನ್ಯಜೀವಿಗಳ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗುವುದನ್ನು ಪ್ರತಿಯೊಬ್ಬರು ಮನಗಾಣಬೇಕಿದೆ.
-ಕೆ.ಎಸ್. ಮೂರ್ತಿ