ನಾಪೋಕ್ಲು, ನ. 11: ನಾಪೋಕ್ಲುವಿನಲ್ಲಿ ಈಚೆಗೆ ನಡೆದ ದಂಪತಿಗಳ ಮೇಲೆ ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಇಂದು ಪತ್ತೆಹಚ್ಚಿ ಪೋಲಿಸರು ಬಂಧಿಸಿದ್ದಾರೆ. ನಾಪೋಕ್ಲುವಿನ ಅಬೂಬಕರ್ ಅವರ ಮಗ ಅನ್ಸರ್, ಇಬ್ರಾಹಿಂ ಅವರ ಮಗ ಇರ್ಷಾದ್ ಹಾಗೂ ರಹೀಂ ಬಂಧಿತರು. ನೆಲಜಿ ಗ್ರಾಮದ ಜಗದೀಶ್ ಮತ್ತು ದೇವಕ್ಕಿ ದಂಪತಿಗಳ ಮೇಲೆ ಈಚೆಗೆ ಬೇತು ಗ್ರಾಮದ ಮಕ್ಕಿದೇವಾಲಯ ರಸ್ತೆಯಲ್ಲಿ ಜೀಪ್ ತಡೆದು ಆರೋಪಿಗಳು ಹಲ್ಲೆ ನಡೆಸಿದ್ದರು.
ನೆಲಜಿ ಗ್ರಾಮದ ಮಣವಟ್ಟೀರ ಜಗದೀಶ್ ಮತ್ತು ದೇವಕ್ಕಿ ಎಂಬವರ ಮೇಲೆ ಯುವಕರ ತಂಡವೊಂದು ಹಲ್ಲೆ ನಡೆಸಿ ಪರಾರಿಯಾಗಿರುವ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದರು. ನಾಪೋಕ್ಲು ಪೊಲೀಸರು ಇಂದು ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮಕೈಗೊಂಡಿದ್ದಾರೆ.