ಮಡಿಕೇರಿ, ನ. 17: ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ತಾ. 15 ರಂದು ಕೇರಳದಿಂದ ಆಗಮಿಸಿದ್ದ ಯುವಕರ ತಂಡವೊಂದು ಪುಂಡಾಟಿಕೆ ತೋರಿದ್ದು, ಈ ಬಗ್ಗೆ ಪ್ರಶ್ನಿಸಿದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಅವರ ಮೇಲೆಯೇ ಹಲ್ಲೆ ನಡೆಸಲು ಮುಂದಾಗಿದ್ದ ಪ್ರಕರಣ ನಡೆದಿದೆ.ಈ ಸಂದರ್ಭ ಸ್ಥಳದಲ್ಲಿದ್ದ ಸ್ಥಳೀಯ ಭಕ್ತಾದಿಗಳು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಇವರ ಪುಂಡಾಟ ವನ್ನು ತಡೆಯಲು ಯತ್ನಿಸಿದ ಪೊನ್ನಂಪೇಟೆ ಕೊಡವ ಸಮಾಜದ ನಿರ್ದೇಶಕರಾಗಿರುವ ಚೆಪ್ಪುಡಿರ ರಾಕೇಶ್ ದೇವಯ್ಯ ಅವರಿಗೆ ಗಂಭೀರ ಸ್ವರೂಪದ ಗಾಯವುಂಟಾಗಿದೆ. ಈ ಘಟನೆಯ ಬಗ್ಗೆ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕವಾದ ದೂರು ನೀಡಲಾಗಿದೆ. ವ್ಯವಸ್ಥಾಪನಾ ಸಮಿತಿಯ ಮೂಲಕ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಅವರು ದೂರು ನೀಡಿದ್ದರೆ, ಗಾಯಗೊಂಡಿ ರುವ ರಾಕೇಶ್ ದೇವಯ್ಯ ಕೂಡ ಪ್ರತ್ಯೇಕವಾದ ದೂರು ನೀಡಿದ್ದಾರೆ. ಸೋಜಿಗ ವೆಂದರೆ, ಪೊಲೀಸರು ವ್ಯವಸ್ಥಾಪನಾ ಸಮಿತಿ ನೀಡಿದ ದೂರಿನ ಮೇಲೆ ಇನ್ನೂ ಎಫ್‍ಐಆರ್ ದಾಖಲು ಮಾಡಿಲ್ಲ. ಆದರೆ ರಾಕೇಶ್ ದೇವಯ್ಯ ಅವರ ದೂರಿನಂತೆ 10 ಮಂದಿಯ ವಿರುದ್ಧ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಘಟನೆಯ ವಿವರ ತಾ. 15ರ ಶನಿವಾರ ರಜಾ ದಿನ ವಾಗಿದ್ದು, ವಾರಾಂತ್ಯವೂ ಆದ್ದರಿಂದ ಕ್ಷೇತ್ರಕ್ಕೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿ ಗರು ಆಗಮಿಸಿದ್ದರು. (ಮೊದಲ ಪುಟದಿಂದ) ಈ ಸಂದರ್ಭದಲ್ಲಿ ಕೇರಳದ ಕೆಲವು ಯುವಕರು ಕಮಾನ್ ಬಳಿಯಲ್ಲಿ ಕಟ್ಟೆಯಲ್ಲಿ ಕುಳಿತು ಮಾಸ್ಕ್ ಅನ್ನೂ ಧರಿಸದೆ, ಯುವತಿಯರನ್ನು ಚುಡಾಯಿಸುತ್ತಿದ್ದರೆನ್ನಲಾಗಿದೆ. ಈ ಬಗ್ಗೆ ಪ್ರಶ್ನಿಸಲು ಮುಂದಾದ ಸಮಿತಿ ಅಧ್ಯಕ್ಷ ತಮ್ಮಯ್ಯ ಅವರ ಮೇಲೆಯೇ ಈ ಯುವಕರು ತಿರುಗಿ ಬಿದ್ದಿದ್ದಾರೆ. ಇದೇ ಸಂದರ್ಭ ಸ್ಥಳದಲ್ಲಿದ್ದ ಸ್ಥಳೀಯರು ಈ ತಂಡದ ವರ್ತನೆಯನ್ನು ಖಂಡಿಸಿ ತಮ್ಮಯ್ಯ ಅವರ ಪರ ನಿಂತಿದ್ದಾರೆ. ಈ ವೇಳೆ ಗಲಾಟೆಯನ್ನು ತಡೆಯಲು ಯತ್ನಿಸಿದ್ದ ಸ್ಥಳದಲ್ಲಿದ್ದ ಪೊನ್ನಂಪೇಟೆ ಕೊಡವ ಸಮಾಜದ ನಿರ್ದೇಶಕ ರಾಕೇಶ್ ದೇವಯ್ಯ ಅವರ ಕೈಗೆ ಈ ಯುವಕರು ಗಾಯಪಡಿಸಿದ್ದಾರೆ.
ಬಳಿಕ ಇವರನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಲಾಗಿತ್ತು. ಘಟನೆ ಸಂದರ್ಭ ತಲಕಾವೇರಿಯಲ್ಲಿ ಕೇವಲ ಇಬ್ಬರು ಪೊಲೀಸರು ಮಾತ್ರವೇ ಇದ್ದರೆನ್ನಲಾಗಿದೆ. ಕಿರು ಸಂಕ್ರಮಣದ ಸಂದರ್ಭ ಹಾಗೂ ರಜಾದಿನವಾಗಿದ್ದ ಹಿನ್ನೆಲೆಯಲ್ಲಿ ಜನತೆಯ ಸಂಖ್ಯೆ ಅಧಿಕವಿದ್ದರೂ ಹೆಚ್ಚಿನ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಿ ರಲಿಲ್ಲವೆನ್ನಲಾಗಿದೆ.
ಪುಂಡಾಟ ನಡೆಸಿದ ಯುವಕರನ್ನು ಪೊಲೀಸರಿಗೆ ಒಪ್ಪಿಸಿ ದೂರು ನೀಡಿದರೂ ಪೊಲೀಸರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿಲ್ಲವೆನ್ನಲಾಗಿದೆ. ಬದಲಿಗೆ ಸಂಜೆ ವೇಳೆ ಇವರನ್ನು ದೂರು ದಾಖಲಿಸದೇ ಬಿಡಲಾಗಿತ್ತು. ಈ ಬಗ್ಗೆ ಸ್ಥಳೀಯರು ಹಾಗೂ ರಾಕೇಶ್ ದೇವಯ್ಯ ಮತ್ತಿತರರು ಭಾಗಮಂಡಲ ಠಾಣೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಬಳಿಕ ಇವರನ್ನು ಮಡಿಕೇರಿಯ ಡಿವೈಎಸ್‍ಪಿ ಕಚೇರಿಗೆ ಕಳುಹಿಸಲಾಗಿತ್ತು. ಆದರೆ ಇಲ್ಲೂ ಡಿವೈಎಸ್‍ಪಿ ಅವರು ಲಭ್ಯವಾಗದೆ ಮತ್ತೆ ತಡರಾತ್ರಿಯಲ್ಲಿ ಭಾಗಮಂಡಲ ಠಾಣೆಗೆ ಕಳುಹಿಸಲಾಗಿತ್ತು.
ಅಲ್ಲಿ ದೂರು ದಾಖಲು ಮಾಡಲು ಆಗ್ರಹಿಸಿದ ಹಿನ್ನೆಲೆಯಲ್ಲಿ ಮುಂಜಾನೆ 2 ಗಂಟೆ ಸುಮಾರಿಗೆ ಪೊಲೀಸರು 10 ಯುವಕರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ರಾಕೇಶ್ ದೂರಿನಂತೆ ಎಫ್‍ಐಆರ್ ದಾಖಲಾಗಿದ್ದರೂ ಸಮಿತಿ ಮೂಲಕ ನೀಡಿರುವ ದೂರು ಇನ್ನೂ ಹಾಗೇಯೇ ಇದೆ ಎನ್ನಲಾಗಿದೆ. ಪ್ರವಾಸಿ ಕ್ಷೇತ್ರವಲ್ಲದ ಧಾರ್ಮಿಕ ಹಿನ್ನೆಲೆಯ ಸ್ಥಳವಾದ ಇಲ್ಲಿ ನಡೆದಿರುವ ಬೆಳವಣಿಗೆಯ ಬಗ್ಗೆ ಇದೀಗ ಸ್ಥಳೀಯ ಭಕ್ತಾದಿಗಳಿಂದ ತೀವ್ರ ಆಕ್ಷೇಪ ವ್ಯಕ್ತಗೊಂಡಿದೆ.
10 ಮಂದಿ ಯಾರ್ಯಾರು
ದೂರು ದಾಖಲಾದ 10 ಯುವಕರ ಹೆಸರು ಇಂತಿದೆ. ಕಾಸರಗೋಡಿನ ಆದರ್ಶ್, ಮಂಜುನಾಥನ್, ಪ್ರಿಯೇಶ್, ಗೋಕುಲ, ಸಂದೀಪ್, ಮದುಶಾನ್, ಅವಿನಾಶ್, ಮಿಥುನ್‍ರಾಜ್, ರಂಜಿತ್ ಹಾಗೂ ಅನಶ್ವರ್.