ಸೋಮವಾರಪೇಟೆ, ನ.17: ಮೀಸಲು ಅರಣ್ಯದಿಂದ ಬೀಟೆ ಮತ್ತು ತೇಗದ ಮರಗಳನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರಪೇಟೆ ಅರಣ್ಯ ಇಲಾಖಾ ಸಿಬ್ಬಂದಿಗಳು ಹಾನಗಲ್ಲು ಬಾಣೆಯ ಐವರನ್ನು ಬಂಧಿಸಿದ್ದು, ಪ್ರಕರಣದ ಪ್ರಮುಖ ಆರೋಪಿಗಳಾದ ಹಾನಗಲ್ಲು ಶೆಟ್ಟಳ್ಳಿ ಗ್ರಾಮದ ಅಭಿಷೇಕ್ ಹಾಗೂ ನಂದ ಅವರುಗಳು ತಲೆಮರೆಸಿಕೊಂಡಿದ್ದಾರೆ.

ಹುದುಗೂರು ಮೀಸಲು ಅರಣ್ಯ ವ್ಯಾಪ್ತಿಗೆ ಒಳಪಡುವ ಕಾಜೂರು ಗುಳಿಗಪ್ಪ ದೇವಾಲಯದ ಬಳಿಯ ಅರಣ್ಯದಲ್ಲಿ 10 ದಿನದ ಹಿಂದೆ ತೇಗದ ಮರವನ್ನು ಕಡಿದು, ಮೂರು ದಿನಗಳ ಹಿಂದೆ ಬೇರೆ ಸ್ಥಳಕ್ಕೆ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾನಗಲ್ಲುಬಾಣೆ ಗ್ರಾಮದ ಅಬ್ದುಲ್ ಸತ್ತಾರ್ ಅವರ ಪುತ್ರ ಅಬ್ದುಲ್ ರೆಹಮಾನ್ ಅಲಿಯಾಸ್ ರಯ್ಯು, ಶ್ರೀನಿವಾಸ್ ಅವರ ಪುತ್ರ ರಾಜ ಅಲಿಯಾಸ್ ಯಡೂರು ರಾಜ, ಶೇಷಪ್ಪ ಅವರ ಪುತ್ರ ಬಿ.ಎಸ್. ರಮೇಶ್, ಸ್ವಾಮಿ ಅವರ ಪುತ್ರ ಮೋಹನ್‍ಕುಮಾರ್ ಅಲಿಯಾಸ್ ಸಂತೋಷ್, ರಜಿ ಅವರ ಪುತ್ರ ಸಂಪತ್ ಅವರುಗಳನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ಹಾನಗಲ್ಲು ಶೆಟ್ಟಳ್ಳಿ ಗ್ರಾಮದ ಕಾರ್ಯಪ್ಪ ಅವರ ಪುತ್ರ ಅಭಿಷೇಕ್ ಹಾಗೂ ಅದೇ ಗ್ರಾಮದ ಚಂಗಪ್ಪ ಅವರ ಪುತ್ರ ಜಗನ್ನಾಥ್ ಅಲಿಯಾಸ್ ನಂದ ಅವರುಗಳು ಸ್ಥಳದಿಂದ ಪರಾರಿಯಾಗಿ, ತಲೆಮರೆಸಿಕೊಂಡಿದ್ದಾರೆ.

ಕಳೆದ 10 ದಿನಗಳ ಹಿಂದೆ ಕಾಜೂರು ಮೀಸಲು ಅರಣ್ಯದಲ್ಲಿ 4 ತೇಗ ಮತ್ತು ಬೀಟೆ ಮರಗಳನ್ನು ಕಡಿಯಲಾಗಿತ್ತು. ಇದಾಗಿ 7 ದಿನಗಳ ನಂತರ ಅಕ್ರಮವಾಗಿ ಕಡಿದಿದ್ದ ಮರಗಳನ್ನು ಅರಣ್ಯಾಧಿಕಾರಿಗಳ ಕಣ್ತಪ್ಪಿಸಿ, ನಡುರಾತ್ರಿಯಲ್ಲಿ ಚಂದನಮಕ್ಕಿ ಗ್ರಾಮದಲ್ಲಿರುವ ಹಾನಗಲ್ಲು ಶೆಟ್ಟಳ್ಳಿ ಗ್ರಾಮದ ಅಭಿಷೇಕ್ ಅವರ ತೋಟದಲ್ಲಿ ಅಡಗಿಸಿಡಲಾಗಿತ್ತು. ಚಂದನಮಕ್ಕಿ ಗ್ರಾಮದ ತೋಟದಲ್ಲಿ ಅಡಗಿಸಿಟ್ಟಿದ್ದ 2 ಬೀಟೆ ಮತ್ತು 8 ತೇಗದ ತುಂಡುಗಳನ್ನು ನಿನ್ನೆ ನಸುಕಿನ ವೇಳೆಯಲ್ಲಿ ಡಸ್ಟರ್ ಕಾರಿಗೆ ತುಂಬಿಸುತ್ತಿದ್ದ ಸಂದರ್ಭ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಸಂದರ್ಭ ಸ್ಥಳದಲ್ಲಿದ್ದ ಪ್ರಮುಖ ಆರೋಪಿಗಳಾದ ಹಾನಗಲ್ಲುಶೆಟ್ಟಳ್ಳಿಯ ಅಭಿಷೇಕ್ ಹಾಗೂ ನಂದ ಅವರುಗಳು ಅಭಿಷೇಕ್‍ಗೆ ಸೇರಿದ ಪಿಕ್‍ಅಪ್ ವಾಹನದಲ್ಲಿ ಪರಾರಿ ಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ ನ್ಯಾಯಾಧೀಶರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

500 ರೂ-ಕ್ವಾರ್ಟರ್‍ಗೆ ಕಳ್ಳತನ: ಇದರಲ್ಲಿ ಸಂಪತ್ ಎಂಬಾತ ಕಾಜೂರಿನ ಅರಣ್ಯ ಇಲಾಖಾ ವಸತಿ ಗೃಹದ ಬಳಿ ರಾತ್ರಿ ಅಡಗಿ, ಅರಣ್ಯ ಇಲಾಖಾ ಸಿಬ್ಬಂದಿಗಳ ಚಲನ ವಲನ ಗಮನಿಸಿ, ಸಹಕಳ್ಳರಿಗೆ ಮಾಹಿತಿ ಒದಗಿಸುತ್ತಿದ್ದ ಎನ್ನಲಾಗಿದೆ. ಇತರ ಕಳ್ಳರು ಮರ ಕುಯ್ಯುತ್ತಿದ್ದ ಸಂದರ್ಭ ವಸತಿ ಗೃಹದಲ್ಲಾಗುತ್ತಿದ್ದ ಬೆಳವಣಿಗೆ ಬಗ್ಗೆ ಮಾಹಿತಿ ನೀಡುತ್ತಿದ್ದ. ಸಿಬ್ಬಂದಿಗಳು ಹೊರ ಬಂದರೆ ತಕ್ಷಣ ಮೊಬೈಲ್ ಮೆಸೇಜ್ ಕಳುಹಿಸಿ ಎಚ್ಚರಿಸುತ್ತಿದ್ದ ಎನ್ನಲಾಗಿದೆ. ಕಳೆದ 4 ವರ್ಷದಿಂದಲೂ ಕಳ್ಳತನ ಮಾಡುತ್ತಿರುವ ಬಗ್ಗೆ ಸಂಪತ್ ಬಾಯಿಬಿಟ್ಟಿದ್ದು, ಐವರು ಕಾರ್ಮಿಕರಿಗೆ ತಲಾ 500 ಸಂಬಳ, ಊಟ ಹಾಗೂ ಒಂದು ಕ್ವಾರ್ಟರ್ ನೀಡುತ್ತಿದ್ದರು ಎಂದು ಅರಣ್ಯ ಇಲಾಖಾಧಿಕಾರಿಗಳ ತನಿಖೆ ಸಂದರ್ಭ ಬಾಯಿಬಿಟ್ಟಿದ್ದಾನೆ.

ಗಾಳಿಯಲ್ಲಿ ಗುಂಡು: ಚಂದನಮಕ್ಕಿ ಗ್ರಾಮದ ತೋಟದಿಂದ ಬೀಟೆ ಮತ್ತು ತೇಗದ ಮರಗಳನ್ನು ಸಾಗಿಸುತ್ತಿದ್ದ ಸಂದರ್ಭ ಅರಣ್ಯಾಧಿಕಾರಿಗಳು ಧಾಳಿ ನಡೆಸಿದ್ದು, ಈ ಸಂದರ್ಭ ಅಧಿಕಾರಿಗಳು ಗಾಳಿಯಲ್ಲಿ ಗುಂಡು ಹಾರಿಸಿ, ಮರಗಳ್ಳರ ಸಹಿತ ಸ್ಥಳದಲ್ಲಿದ್ದ ಒಂದೂವರೆ ಲಕ್ಷ ಮೌಲ್ಯದ ಮರಗಳು, ಡಸ್ಟರ್ ಕಾರನ್ನು ವಶಕ್ಕೆ ಪಡೆದಿದ್ದಾರೆ.

ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಿ.ಡಿ. ನೆಹರು ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಪರೀಕ್ಷಾರ್ಥ) ಎಸ್. ಸುಮಂತ್, ಉಪ ವಲಯ ಅರಣ್ಯಾಧಿಕಾರಿ ಎಂ.ಕೆ. ಮನು, ನಾರಾಯಣ ಮೂಲ್ಯ, ಅರಣ್ಯ ರಕ್ಷಕರುಗಳಾದ ಹೆಚ್.ಪಿ. ರಾಜಣ್ಣ, ಭರಮಪ್ಪ, ಈರಣ್ಣ ದಳವಾಯಿ, ಅರಣ್ಯ ವೀಕ್ಷಕರುಗಳಾದ ಪ್ರಸಾದ್‍ಕುಮಾರ್, ಮೋಹನ್‍ಕುಮಾರ್, ಸುಂದರ್, ದಿವಾಕರ, ವಾಹನ ಚಾಲಕ ಸಂತೋಷ್, ನಂದೀಶ್ ಅವರುಗಳು ಭಾಗವಹಿಸಿದ್ದರು.