ಮಡಿಕೇರಿ, ನ. 15: ಇದೇ ತಾ. 19 ರಂದು ಶನಿ (Sಚಿಣuಡಿಟಿ), ಗುರು (ಎuಠಿiಣeಡಿ) ಗ್ರಹಗಳು ಹಾಗೂ ಚಂದ್ರನು ಆಗಸದಲ್ಲಿ ತ್ರಿಕೋನ ಆಕಾರದ 3 ಮೂಲೆಗಳಾಗಿ ಆಕರ್ಷಿಸಲಿವೆ. ಪ್ರಸ್ತುತ ರಾತ್ರಿಯ ಆಗಸದಲ್ಲಿ ಮಂಗಳ ಹಾಗೂ ಗುರು ಗ್ರಹಗಳು ಮೋಡ ರಹಿತ ವಾತಾವರಣದಲ್ಲಿ ಹೊಳೆಯುತ್ತಿವೆ. ಗುರು ಗ್ರಹದ ಸ್ವಲ್ಪ ಮೇಲ್ಭಾಗದಲ್ಲಿ ಶನಿಯೂ ಹೊಳೆಯುತ್ತಿದ್ದು ಲೈಟ್ ರಹಿತ ಗ್ರಾಮೀಣ ಭಾಗಗಳಲ್ಲಿ ಇದನ್ನು ಕೂಡ ಯಾವುದೇ ದುರ್ಬೀನುಗಳಿಲ್ಲದೆ ಗಮನಿಸಬಹುದಾಗಿದೆ. ತಾ. 19 ರಂದು ಶನಿ, ಗುರುಗಳ ಜೋಡಿಗೆ ಚಂದ್ರನು ಕೂಡ ಸೇರ್ಪಡೆಗೊಳ್ಳಲಿದ್ದು ತ್ರಿಕೋನ ಸೃಷ್ಟಿಸಲಿವೆ. ತ್ರಿಕೋನದ ಮೇಲ್ಭಾಗದಲ್ಲಿ ಶನಿ, ಕೆಳಭಾಗಗಳಲ್ಲಿ ಚಂದ್ರ (ಎಡಭಾಗದಲ್ಲಿ) ಹಾಗೂ ಗುರು (ಬಲಭಾಗದಲ್ಲಿ) ಖಗೋಳಾಸಕ್ತರ ಗಮನ ಸೆಳೆಯಲಿವೆ.

ವೀಕ್ಷಣೆ ಹೇಗೆ?: ತಾ. 19 ರಂದು ಸಂಜೆ ಸುಮಾರು 5 ಗಂಟೆಗೆ ಚಂದ್ರನು ಈ 2 ಗ್ರಹಗಳ ಸಮೀಪ ಸಾಗಲಿದ್ದು ಸುಮಾರು 9:30 ರವರೆಗೂ ತ್ರಿಕೋನಾಕಾರದಲ್ಲಿ ಶನಿ, ಗುರು ಹಾಗೂ ಚಂದ್ರ ಕಾಣಲಿವೆ. ನಂತರ ಗುರು ಗ್ರಹ ಅಸ್ತವಾಗಲಿದ್ದು ಚಂದ್ರ ಹಾಗೂ ಶನಿಯು ಅಸ್ತವಾಗಲಿವೆ. ಅಂದು ಸಂಜೆ 5:59ಕ್ಕೆ ಸೂರ್ಯಾಸ್ತವಾಗಲಿದ್ದು ನಂತರ ಪಶ್ಚಿಮ ದಿಕ್ಕಿನತ್ತ ನೋಡಿದರೆ ಅಪರೂಪದ ಈ ತ್ರಿಕೋನವನ್ನು ವೀಕ್ಷಿಸಬಹುದಾಗಿದೆ. ಸೂರ್ಯಮಂಡಲದ ಗ್ರಹಗಳ ಪೈಕಿ ಸೂರ್ಯನಿಂದ ಅತ್ಯಂತ ದೂರವಿರುವ ಗ್ರಹ ಪ್ಲೂಟೋ ಅನ್ನು ಇತ್ತೀಚೆಗೆ ಅದರ ಚಿಕ್ಕದಾದ ಗಾತ್ರ ಹಾಗೂ ಸೂರ್ಯನಿಂದ ಅತೀ ದೂರವಿರುವ ಕಾರಣ ಗ್ರಹಗಳ ಪಟ್ಟಿಯಿಂದ ತೆರವುಗೊಳಿಸಲಾಯಿತು. ಈ ಗ್ರಹವು ಕೂಡ ತ್ರಿಕೋನಾಕಾರ ಪ್ರದರ್ಶನದ ಸಂದರ್ಭ ಗುರು ಗ್ರಹದ ಹಿಂದೆಯೆ ಇರಲಿದೆ. ಆದರೆ ಯಾವುದೇ ದುರ್ಬೀನುಗಳ ಪ್ರಯೋಗವಿಲ್ಲದೆ ಇದನ್ನು ವೀಕ್ಷಿಸಲು ಅಸಾಧ್ಯ. -ಪ್ರಜ್ವಲ್