ಸಿದ್ದಾಪುರ, ನ. 15: ಕಾಫಿ ತೋಟದೊಳಗೆ ಕಾಡಾನೆಗಳು ದಾಂಧಲೆ ನಡೆಸಿ ಕಾಫಿ ಪಸಲು ಸೇರಿದಂತೆ ಇನ್ನಿತರ ಫಸಲುಗಳನ್ನು ನಾಶಪಡಿಸಿರುವ ಘಟನೆ ಅಭ್ಯತ್ ಮಂಗಲ ಗ್ರಾಮದಲ್ಲಿ ನಡೆದಿದೆ. ಅಭ್ಯತ್ಮಂಗಲ ಗ್ರಾಮದ ನಿವಾಸಿ ಅಂಚೆಮನೆ ಗಣಪತಿ ಎಂಬವರಿಗೆ ಸೇರಿದ ಮಾರಿಗುಡಿ ಕಾಫಿ ತೋಟದೊಳಗೆ ಎರಡು ಕಾಡಾನೆಗಳು ಬೀಡುಬಿಟ್ಟು ಕಳೆದ ಮೂರು ದಿನಗಳಿಂದ ನಿರಂತರವಾಗಿ ಕಾಫಿ ತೋಟಗಳಲ್ಲಿ ದಾಂಧಲೆ ನಡೆಸಿ ಪಸಲುಗಳಿರುವ ಕಾಫಿ ಗಿಡಗಳನ್ನು ತುಳಿದು ಧ್ವಂಸ ಮಾಡಿವೆ. ಅಲ್ಲದೆ ತೆಂಗಿನ ಮರಗಳನ್ನು ಸೊಂಡಿಲಿನಿಂದ ಎಳೆದು ಹಾಕಿವೆ. ಇದರಿಂದಾಗಿ ಅಪಾರ ನಷ್ಟ ಸಂಭವಿಸಿದೆ ಎಂದು ತೋಟದ ಮಾಲೀಕ ಗಣಪತಿ ತಿಳಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.