ಕೂಡಿಗೆ, ನ. 15: ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಪ್ರದೇಶದಲ್ಲಿ ಹಾರಂಗಿಯಿಂದ ಕೊಡಗಿನ ಗಡಿ ಭಾಗದವರೆಗೆ ಕೃಷಿ ಇಲಾಖೆಯ ವತಿಯಿಂದ ಪರಿಷ್ಕರಿಸಿದ ಹೈಬ್ರೀಡ್ ತಳಿಯ ಭತ್ತದ ಬೀಜ ವನ್ನು ಬಿತ್ತನೆ ಮಾಡಿ ನಾಟಿ ಮಾಡಿ ನಾಲ್ಕು ತಿಂಗಳುಗಳು ಕಳೆದಿದೆ. ಇದೀಗ ಭತ್ತದ ಬೆಳೆಯು ಕಾಳು ಕಟ್ಟುವ ಹಂತವನ್ನು ತಲುಪಿದೆ. ಆದರೆ, ಅಕಾಲಿಕ ಮಳೆಯಿಂದಾಗಿ ಸಮಸ್ಯೆ ಎದುರಾಗಿದೆ. ತೆನೆ ಕಟ್ಟುತ್ತಿರುವ ಭತ್ತಕ್ಕೆ ಭಾರೀ ಹಾನಿಯಾಗಿದೆ.
ಹಾರಂಗಿ ಅಚ್ಚುಕಟ್ಟು ಪ್ರದೇಶಗಳಾದ ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಿಗೆ ಶಿರಂಗಾಲ ಹೆಬ್ಬಾಲೆ ತೊರೆನೂರು ಗ್ರಾಮಗಳ ಅಚ್ಚುಕಟ್ಟು ಪ್ರದೇಶದ ಮೂರು ಸಾವಿರ ಹೆಕ್ಟೇರ್ ಎಕರೆ ಹೆಚ್ಚು ಪ್ರದೇಶದಲ್ಲಿ ಭತ್ತದ ನಾಟಿ ಗದ್ದೆಗಳಲ್ಲಿ ಈಗಾಗಲೇ ಕಾಳು ಕಟ್ಟಿದ್ದು ಅನೇಕ ಭತ್ತದ ಕಾಳುಗಳು ಜೆಳ್ಳು ಬೀಳುತ್ತವೆ. ಈ ಬಾರಿ ಕೊರೊನಾ ನಡುವೆ ವಿಪರೀತ ಮಳೆಯಿಂದಾಗಿ ಪ್ರಕೃತಿ ವಿಕೋಪ ಹಿನ್ನೆಡೆಯಲ್ಲಿ ಕಾವೇರಿ ನದಿಯ ನೀರು ಹೆಚ್ಚುವರಿ ಅಗಿ ಕಾವೇರಿ ನದಿ ದಂಡೆಯ ಅನೇಕ ನಾಟಿ ಗದ್ದೆಗಳು ಮುಳುಗಿ ನಾಟಿ ಬೆಳೆಯು ಕರಗಿ ಹೋಗಿತು ಅಳಿದುಳಿದ ಬೆಳೆಯು ಸಹ ಈ ಅಕಾಲಿಕವಾಗಿ ಬೀಳುತ್ತಿರುವ ಮಳೆಯಿಂದಾಗಿ ಬೆಳೆಯು ಹಾಳಾಗುವಂತಹ ಪ್ರಸಂಗಗಳು ಎದುರಾಗುತ್ತಿವೆ.
ಈ ಬಾರಿ ಹಾರಂಗಿ ಅಚ್ಚುಕಟ್ಟು ಪ್ರದೇಶದ ಭತ್ತದ ಬೆಳೆಗೆ ಬೆಂಕಿ ರೋಗ ಕಾಣಿಸಿಕೊಂಡು ಅನೇಕ ಗದ್ದೆಗಳು ಒಣಗುತ್ತಿವೆ. ಅಲ್ಲದೆ ನಾಲ್ಕು ತಿಂಗಳ ಬೆಳೆಗಳಾಗಿದ್ದು, ಇನ್ನೇನು ಬೆಳೆಯನ್ನು ಕೊಯ್ಯುವ ಸಮಯ ಹತ್ತಿರ ಬರುತ್ತಿರುವ ದಿನಗಳಲ್ಲಿ ಮಳೆಯಿಂದಾಗಿ ಬಾರಿ ತೊಂದರೆಗಳು ಉಂಟಾಗುತ್ತವೆ ಎಂದು ಈ ವ್ಯಾಪ್ತಿಯ ರೈತರು ಆತಂಕಪಡುವಂತಾಗಿದೆ.