ಹುದುಗೂರು ಗ್ರಾಮಸ್ಥರ ಅಸಮಾಧಾನ

ಕೂಡಿಗೆ, ನ. 14: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಬ್ರಿಟಿಷ್ ಕಾಲದ ಗೋಸದನದ ಜಾಗದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯವರು ಸಸ್ಯ ಕ್ಷೇತ್ರವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಈ ಜಾಗವನ್ನು ಹುದುಗೂರು ಗ್ರಾಮಸ್ಥರ ಮನವಿಯ ಮೇರೆಗೆ ಗೋಸದನವನ್ನು ಪ್ರಾರಂಭಿಸಲು ಬೇಕಾಗುವ ಎಲ್ಲಾ ಸಿದ್ಧತೆಗಳನ್ನು ಮಾಡುವಂತೆ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಸೂಚನೆ ನೀಡಿದ್ದರು

ಅದರಂತೆ ಆ ಸ್ಥಳವನ್ನು ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯವರು ಜಂಟಿಯಾಗಿ ಸರ್ವೆ ಕಾರ್ಯ ನಡೆಸಿದರು. ಆದರೆ ಸರ್ವೆ ನಡೆದು ಒಂದು ವರ್ಷ ಕಳೆದರೂ ಸಂಬಂಧಿಸಿದ ಇಲಾಖೆಯಿಂದ ಯಾವುದೇ ಆದೇಶ ಬರದೆ ಮುಂದಿನ ಯೋಜನೆಗಳು ಸ್ಥಗಿತಗೊಂಡಿವೆ.

ಹುದುಗೂರು ಗ್ರಾಮದಲ್ಲಿ ಗೋಸದನವನ್ನು ಪ್ರಾರಂಭಿಸಲು ಶಾಸಕರು ಸರಕಾರದ ಮಟ್ಟದಲ್ಲಿ ಹಣ ಬಿಡುಗಡೆ ಮಾಡಿಸಿದ್ದರೂ ಈ ಜಾಗದ ಆರ್.ಟಿ.ಸಿ. ಅರಣ್ಯ ಇಲಾಖೆಯ ಹೆಸರಿನಲ್ಲಿ ಇರುವುದರಿಂದ ಯಾವುದೇ ರೀತಿಯ ಕೆಲಸಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.

ಈಗಿರುವ ಸ್ಥಳದಲ್ಲಿ ಗೋಸದನ ಆರಂಭಿಸಲು ಬೇಕಾಗುವ ಎಲ್ಲಾ ವ್ಯವಸ್ಥೆಗಳು ಇದ್ದು, ಪಕ್ಕದಲ್ಲಿ ಹಾರಂಗಿ ನದಿಯು ಹರಿಯುತ್ತಿರುವುದರಿಂದ ನೀರಿನ ಸೌಲಭ್ಯ ಕೂಡ ಉತ್ತಮವಾಗಿದೆ. ಅಲ್ಲದೆ ಅರಣ್ಯವೂ ಪಕ್ಕದಲ್ಲೆ ಇರುವುದರಿಂದ ಮೇವುಗಳ ಸಂಗ್ರಹಕ್ಕೆ ಅನುಕೂಲವಾಗಲಿದೆ ಎಂದು ತಿಳಿದ ಮೇರೆಗೆ ಶಾಸಕರು ಅನುದಾನವನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಶಾಸಕ ಅಪ್ಪಚ್ಚು ರಂಜನ್ ಖುದ್ದಾಗಿ ಸ್ಥಳ ಪರಿಶೀಲನೆ ಕೂಡ ಮಾಡಿದ್ದಾರೆ. ಆದರೆ ಇದುವರೆಗೂ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದೆ ಅಧಿಕಾರಿ ವರ್ಗದವರು ನಿರ್ಲಕ್ಷ ಮನೋಭಾವ ತೋರುತ್ತಿದ್ದಾರೆ ಎಂದು ಹುದುಗೂರು ಗ್ರಾಮ ಹಿತರಕ್ಷಣಾ ಸಮಿತಿ ಸದಸ್ಯರು ಆರೋಪಿಸಿದ್ದಾರೆ.

ರೈತರಿಗೆ ಅನುಕೂಲವಾಗುವಂತೆ ಗೋಸದನ ಪ್ರಾರಂಭಿಸುವುದರಿಂದ ಹೈನುಗಾರಿಕೆಯನ್ನು ಇನ್ನೂ ಹೆಚ್ಚಿಸಲು ಸಹಕಾರಿಯಾಗುತ್ತದೆ. ಸಂಬಂಧಿಸಿದ ಜಿಲ್ಲಾಮಟ್ಟದ ಅಧಿಕಾರಿ ವರ್ಗದವರು ಮತ್ತು ಕ್ಷೇತ್ರದ ಶಾಸಕರು ಇದರ ಬಗ್ಗೆ ಹೆಚ್ಚು ಗಮನ ಹರಿಸಿ ಗೋಸದನ ಆರಂಭಕ್ಕೆ ಮುಂದಾಗಬೇಕೆಂದು ಮದಲಾಪುರ, ಹುದುಗೂರು, ಸೀಗೆಹೊಸೂರು, ಮಾವಿನಹಳ್ಳ, ಬ್ಯಾಡಗೊಟ್ಟ ಸೇರಿದಂತೆ ಹತ್ತು ಗ್ರಾಮಗಳ ವ್ಯಾಪ್ತಿಯ ರೈತರ ಆಗ್ರಹವಾಗಿದೆ.

- ಕೆ.ಕೆ. ನಾಗರಾಜಶೆಟ್ಟಿ.