ಗೋಣಿಕೊಪ್ಪ ವರದಿ, ನ. 14: ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ವೀರಾಜಪೇಟೆ ಭಾಗದ ರೈತ ಮಹಿಳೆಯರಿಗೆ ಅಣಬೆ ಉತ್ಪಾದನೆ ಮತ್ತು ಸಂಸ್ಕರಣೆಯ ಕುರಿತು ತರಬೇತಿ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ವೀರಾಜಪೇಟೆ ತಾ.ಪಂ. ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನೆ, ಮನೆಗಳಲ್ಲಿ ಅಣಬೆ ಬೆಳೆದು ಆರ್ಥಿಕವಾಗಿ ಸಬಲರಾಗಲು ಮಹಿಳೆಯರಿಗೆ ಅವಕಾಶವಿದೆ. ಸ್ವ ಉದ್ಯೋಗ ರೀತಿಯಲ್ಲಿ ಮಹಿಳೆಯರು ಅಣಬೆ ಬೇಸಾಯಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ವೈಜ್ಞಾನಿಕ ಅಣಬೆ ಕೃಷಿ ಬಗ್ಗೆ ಕೆವಿಕೆ ತಜ್ಞ ಪ್ರಭಾಕರ್ ಸಲಹೆ ನೀಡಿದರು. ಬೆಳೆದ ಬೆಳೆಯನ್ನು ಸಂಸ್ಕರಣೆ ಮಾಡುವುದು ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಪ್ರಾತ್ಯಕ್ಷಿಕೆಯನ್ನು ಸಂಪನ್ಮೂಲ ವ್ಯಕ್ತಿ ರಷ್ಮಿ ಭಾನುಪ್ರಕಾಶ್ ನಡೆಸಿಕೊಟ್ಟರು.
ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕಿ ಡೀನಾ ಅವರು ಸರ್ಕಾರದಿಂದ ದೊರೆಯುವ ಪ್ರೋತ್ಸಾಹಗಳ ಬಗ್ಗೆ ಮಾಹಿತಿ ನೀಡಿದರು. ಅಣಬೆ ಕೃಷಿಗೆ ಸಹಾಯಧನ ಮತ್ತು ಸವಲತ್ತು ಪಡೆದುಕೊಳ್ಳಬೇಕೆಂದರು.