ಕೂಡಿಗೆ, ನ. 14: ಮಕ್ಕಳ ದಿನಾಚರಣೆಯ ದಿನದಂದೇ ಮೂವರು ಕಂದಮ್ಮಗಳು ಹೆತ್ತ ತಾಯಿಯೊಂದಿಗೆ ಇಹಲೋಕ ತ್ಯಜಿಸಿದ ದಾರುಣ ಘಟನೆ ಹೆಬ್ಬಾಲೆಯಲ್ಲಿ ನಡೆದಿದೆ. ಕೌಟುಂಬಿಕ ಕಲಹದಿಂದ ಮನನೊಂದ ಮಹಿಳೆಯೊಬ್ಬಳು ತನ್ನ ಮೂರು ಮಕ್ಕಳನ್ನು ನಾಲೆಗೆ ತಳ್ಳಿ ತಾನೂ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಚನ್ನಮ್ಮ ಎಂಬಾಕೆಯೆ ಕುಡಿಗಳೊಂದಿಗೆ ಅಂತ್ಯಕಂಡ ದುರ್ದೈವಿ.ಮೂಲತಃ ಚಿತ್ರದುರ್ಗದ ಅಯ್ಯನ ಹಳ್ಳಿ ಎಂಬ ಗ್ರಾಮದಿಂದ ಆರು ತಿಂಗಳ ಹಿಂದೆ ಹೆಬ್ಬಾಲೆಯ ಶುಂಠಿ ತೊಳೆಯುವ ಘಟಕದಲ್ಲಿ ಕೆಲಸಕ್ಕೆ ಬಂದಿದ್ದ ದೇವರಾಜು ಮದ್ಯವ್ಯಸನಿಯಾಗಿದ್ದು, ದೇವರಾಜು ಹಾಗೂ ಆತನ ಪತ್ನಿ ಚನ್ನಮ್ಮ ನಡುವೆ ಕಳೆದ ರಾತ್ರಿ ಕೌಟುಂಬಿಕ ವಿಚಾರದಲ್ಲಿ ಜಗಳ ನಡೆದಿದೆ. ಇದನ್ನು ಗಮನಿಸಿದ ನೆರೆಕರೆಯವರು ಮಾಮೂಲಿ ಜಗಳವೆಂದು ಭಾವಿಸಿ ಸುಮ್ಮನಾಗಿದ್ದಾರೆ. ಆದರೆ, ಈ ಜಗಳ ಇಂದು ಮುಂಜಾನೆಯೂ ಮುಂದುವರೆದಿದ್ದು, ಕಲಹ ತಾರಕಕ್ಕೇರಿದೆ. ಇದರಿಂದ ಮನನೊಂದ ಚನ್ನಮ್ಮ (28) ತನ್ನ ಮೂವರು ಮಕ್ಕಳಾದ ವಿಜಯ (6), ವಿನಯ (4) ಹಾಗೂ ದೀಕ್ಷಾ (3) ಇವರುಗಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡು ಹೆಬ್ಬಾಲೆ ಸಮೀಪದ ಸೋಮವಾರಪೇಟೆಗೆ ತೆರಳುವ ರಸ್ತೆ ಬದಿಯಲ್ಲಿ ಹರಿಯುತ್ತಿರುವ ಹಾರಂಗಿ ಎಡದಂಡೆ ನಾಲೆ ಬಳಿಗೆ ಬಂದಿದ್ದಾಳೆ. ಬಳಿಕ ಮೊದಲಿಗೆ ತನ್ನ ಮೂವರು ಮಕ್ಕಳನ್ನು ನಾಲೆಗೆ ತಳ್ಳಿದುದಾಗಿ ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದು, ನಂತರ ತಾನೂ ನೀರಿಗೆ ಹಾರಿದ್ದಾಳೆ.

ತಾಯಿಯ ಕೈಯಿಂದಲೇ ಅಂತ್ಯಕಂಡ ಎರಡು ಗಂಡು, ಒಂದು ಹೆಣ್ಣು ಸೇರಿದಂತೆ ಮೂರು ಮಕ್ಕಳ ಮೃತದೇಹ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಣನೂರು ಹೋಬಳಿಯ ಅರೆಗಲ್ಲು ಎಂಬ ಪ್ರದೇಶದಲ್ಲಿ ಪತ್ತೆಯಾಗಿದೆ. ನೀರಿನಲ್ಲಿ ತೇಲಿ ಬರುತ್ತಿದ್ದ ಮೂರು ಮಕ್ಕಳ ಶವವನ್ನು ಗಮನಿಸಿದ ಅಲ್ಲಿಯೆ ಸಮೀಪದಲ್ಲಿ ಗದ್ದೆ ಕೆಲಸ ಮಾಡುತ್ತಿದ್ದ ಮಂದಿ ಶವಗಳನ್ನು ಮೇಲೆತ್ತಿದ್ದಾರೆ. ಘಟನೆ ಬಗ್ಗೆ ಹಾರಂಗಿ ಜಲಾಶಯದ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ನಾಲೆಯಲ್ಲಿ ನೀರಿನ ಹರಿವನ್ನು ಸ್ಥಗಿತಗೊಳಿಸಿ ಚನ್ನಮ್ಮಳ ಮೃತದೇಹಕ್ಕಾಗಿ ಹುಡುಕಾಟ ಮುಂದುವರೆಸಿದಾಗ ಮಕ್ಕಳ ಶವಗಳು ಸಿಕ್ಕ ಸ್ಥಳದಿಂದ ಅನತಿ ದೂರದಲ್ಲಿ ಚನ್ನಮ್ಮಳ ಶವವೂ ಪತ್ತೆಯಾಗಿದೆ.

ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ದಾವಣಗೆರೆ ಜಿಲ್ಲೆಯವನಾದ ಚನ್ನಮ್ಮಳ ಪತಿ ದೇವರಾಜನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಶಿವಶಂಕರ್ ಭೇಟಿ ನೀಡಿದ್ದರು. -ನಾಗರಾಜಶೆಟ್ಟಿ