ಮಡಿಕೇರಿ, ನ. 13: ಪೌಷ್ಠಿಕ ಆಹಾರದ ಕೊರತೆಯಿಂದ ಬಳಲುತ್ತಿರುವ ಕ್ಷಯರೋಗಿಗಳಿಗೆ; ಉತ್ತಮ ಗುಣಮಟ್ಟದ ಆಹಾರ ಸೇವಿಸುವ ದಿಸೆಯಲ್ಲಿ ಕೇಂದ್ರ ಸರಕಾರದಿಂದ ಆರ್ಥಿಕ ಸಹಾಯಧನ ನೀಡಲಾಗುತ್ತಿದೆ. ಆ ಮುಖಾಂತರ ಈ ರೋಗದಿಂದ ಬಳಲುವವರ ಚೇತರಿಕೆಗೆ ಸರಕಾರ ಕಾಳಜಿ ವಹಿಸಿದೆ. 2004ನೇ ಇಸವಿಯಿಂದ ದೇಶದಲ್ಲಿ ಸಂಪೂರ್ಣ ಕ್ಷಯರೋಗ ನಿವಾರಣೆಯ ಸಂಕಲ್ಪದೊಂದಿಗೆ ಕೇಂದ್ರ ಸರಕಾರದ ಆರೋಗ್ಯ ಸಚಿವಾಲಯ ಕಾರ್ಯಕ್ರಮ ಜಾರಿಗೊಳಿಸಿದೆ.
ಆರೋಗ್ಯ ಇಲಾಖೆಯಿಂದ ಎಲ್ಲಾ ಜಿಲ್ಲೆಗಳಲ್ಲಿ ಈ ಬಗ್ಗೆ ಸಮೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ತಜ್ಞ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ತಂಡ ಮನೆ ಮನೆಗಳಿಗೆ ತೆರಳಿ ಮಾಹಿತಿ ಸಂಗ್ರಹಿಸಲಿದೆ. ಒಂದು ವೇಳೆ ಕ್ಷಯರೋಗದಿಂದ ಬಳಲುವವರು ಅಥವಾ ಪೌಷ್ಠಿಕ ಆಹಾರ ಸಮಸ್ಯೆಯಲ್ಲಿ ಸಿಲುಕಿರುವವರು ಗಮನಕ್ಕೆ ಬಂದರೆ, ಅಂತಹವರಿಗೆ ಸೂಕ್ತ ಚಿಕಿತ್ಸೆ ಒದಗಿಸಲಾಗುತ್ತಿದೆ.
ಈ ದಿಸೆಯಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಆರ್.ಎನ್. ಟಿ.ಸಿ.ಪಿ. ಹಾಗೂ ಎನ್.ಟಿ.ಇ.ಪಿ. ಘಟಕದೊಂದಿಗೆ ಗೋಣಿಕೊಪ್ಪಲು ಹಾಗೂ ಕುಶಾಲನಗರಗಳಲ್ಲಿ ಉಪ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಈ ಘಟಕಗಳಿಂದ ಈಗಾಗಲೇ ಗುರುತಿಸಿರುವಂತೆ ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ 47 ಮಂದಿ ರೋಗಿಗಳನ್ನು ಪತ್ತೆ ಹಚ್ಚಲಾಗಿದೆ. ಇನ್ನು ವೀರಾಜಪೇಟೆ ತಾಲೂಕಿನಲ್ಲಿ ಗೋಣಿಕೊಪ್ಪಲು ಕೇಂದ್ರದಿಂದ 49 ಮಂದಿ ಹಾಗೂ ಕುಶಾಲನಗರ ಕೇಂದ್ರದಿಂದ ಸೋಮವಾರಪೇಟೆ ತಾಲೂಕಿನಲ್ಲಿ 45 ಮಂದಿಯನ್ನು ಗುರುತಿಸಲಾಗಿದೆ.
ಮಾಸಿಕ ಸಂಭಾವನೆ : ಈ ರೀತಿ ಬಳಲುತ್ತಿರುವ ಒಟ್ಟು 141 ಮಂದಿಗೆ ಪ್ರಸ್ತುತ ಜಿಲ್ಲೆಯಲ್ಲಿ ಮಾಸಿಕವಾಗಿ ಆರ್ಥಿಕ ನೆರವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಗೊಳಿಸಲಾಗುತ್ತಿದೆ. ಇಲಾಖೆಯ ಮೂಲಗಳ ಪ್ರಕಾರ ಪ್ರತಿಯೊಬ್ಬ ಫಲಾನುಭವಿಗಳಿಗೆ ಮಾಸಿಕ ರೂ. 500 ಜಮೆಯಾಗುತ್ತಿದೆ. ಬದಲಾಗಿ ಕೊಡಗು ಗುಡ್ಡಗಾಡು ಪ್ರದೇಶವಾಗಿರುವ ಕಾರಣ, ಈ ಜಿಲ್ಲೆಯ ಫಲಾನುಭವಿಗಳಿಗೆ ಮಾಸಿಕ ರೂ. 750 ಮೊತ್ತವನ್ನು ಕೇಂದ್ರ ಸರಕಾರ ಬಿಡುಗಡೆಗೊಳಿಸಿ ವಿಶೇಷ ಕಾಳಜಿ ವಹಿಸಿದೆ.
ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಕ್ಷಯರೋಗ ನಿವಾರಣಾ ವಿಭಾಗದ ಮುಖ್ಯಸ್ಥ ಡಾ. ಆನಂದ್ ಅವರು, ಜಿಲ್ಲೆಯಲ್ಲಿ ಇದುವರೆಗೆ 241 ಮಂದಿಯನ್ನು ಸಮೀಕ್ಷೆ ವೇಳೆ ಗುರುತಿಸಿರುವದಾಗಿ ಮಾಹಿತಿ ನೀಡಿದ್ದಾರೆ. ಅಲ್ಲದೆ 141 ಮಂದಿಗೆ ನಿರಂತರ ಚಿಕಿತ್ಸೆ ಹಾಗೂ ಮಾರ್ಗದರ್ಶನ ಕಲ್ಪಿಸುತ್ತಿರುವದಾಗಿ ವಿವರಿಸಿದ್ದಾರೆ. ಇಂತಹ ಸಮಸ್ಯೆ ಎದುರಿಸುತ್ತಿರುವವರು ಹೆಚ್ಚಿನ ಮಾಹಿತಿಗಾಗಿ 08272-226291ಗೆ ಸಂಪರ್ಕಿಸುವಂತೆ ಸಲಹೆ ನೀಡಿದ್ದಾರೆ.