ಮಡಿಕೇರಿ, ನ. 13: ಸಂಪೂರ್ಣವಾಗಿ ಹದಗೆಟ್ಟಿರುವ ಕರಿಕೆ-ಭಾಗಮಂಡಲ ರಸ್ತೆಯ ಅಭಿವೃದ್ಧಿ ಕಾರ್ಯಕ್ಕೆ ಮುಂದಿನ ಹದಿನೈದು ದಿನಗಳೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ಕರಿಕೆ ವಲಯ ಕಾಂಗ್ರೆಸ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಕರಿಕೆ ಗ್ರಾ.ಪಂ. ಮಾಜಿ ಅಧ್ಯಕ್ಷ ಎನ್. ಬಾಲಚಂದ್ರ ನಾಯರ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾಗಮಂಡಲದಿಂದ ಕರಿಕೆ ಗ್ರಾಮದ ಮೂಲಕ ಕೇರಳಕ್ಕೆ ಹೋಗುವ ರಸ್ತೆಯು 30 ಕಿ.ಮೀ. ಉದ್ದಕ್ಕೂ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದು, ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಈ ಮೊದಲು ಮಾಡಿದ ಮನವಿ ಮತ್ತು ಪ್ರತಿಭಟನೆಗಳಿಗೆ ಜಿಲ್ಲಾಡಳಿತದಿಂದ ಯಾವುದೇ ಸ್ಪಂದನ ದೊರೆಯದ ಕಾರಣ ಹೋರಾಟವನ್ನು ಮತ್ತೊಮ್ಮೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದರು. ಕರಿಕೆ-ಭಾಗಮಂಡಲ ರಸ್ತೆಯಲ್ಲಿ ನಿರಂತರ ವಾಹನ ಸಂಚಾರವಿದ್ದು, ಚೆತ್ತುಕಾಯದಿಂದ ಚೆಂಬೇರಿವರೆಗೆ ನಿತ್ಯ ಸಂಚಾರ ಮಾಡಲು ಕರಿಕೆ ಗ್ರಾಮಸ್ಥರು ಹರಸಹಾಸ ಪಡುವಂತಾಗಿದೆ. 2004ರ ಮೊದಲು ಎಂ.ಎಂ. ನಾಣಯ್ಯ ಅವರು ಮಂತ್ರಿಯಾಗಿದ್ದಾಗ ಚೆಂಬೇರಿಯಿಂದ ಸುಮಾರು 5 ಕಿ.ಮೀ. ರಸ್ತೆ ವಿಸ್ತರಣೆ ನಡೆದಿತ್ತು. ಆ ನಂತರ ಇಲ್ಲಿಯವರೆಗೆ ರಸ್ತೆ ವಿಸ್ತರಣೆಯಾಗಿಲ್ಲ. 2018-19ರ ರಸ್ತೆಯ ವಾರ್ಷಿಕ ನಿರ್ವಹಣೆ ಕೂಡ ಸಮರ್ಪಕವಾಗಿ ನಡೆದಿಲ್ಲ. ಕಾವೇರಿ ತುಲಾ ಸಂಕ್ರಮಣದ ಸಂದರ್ಭದಲ್ಲಿ ರಸ್ತೆಯ ಕಾಡನ್ನು ಕಡಿಯಲಾಗುತ್ತಿತ್ತು. ಆದರೆ ಪ್ರಸ್ತುತ ವರ್ಷ ಈ ಕಾರ್ಯ ನಡೆದಿಲ್ಲ. ಮಳೆಗಾಲದಲ್ಲಿ ಕುಸಿದ ಮಣ್ಣು ಮತ್ತು ಬಿದ್ದ ಮರಗಳನ್ನು ರಸ್ತೆಯಿಂದ ಇದುವರೆಗೆ ತೆರವುಗೊಳಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಞಂಗಾಡ್ನಿಂದ ಪಾಣತ್ತೂರ್ ವರೆಗೆ ಡಿಪಿಆರ್ ಸರ್ವೆ ನಡೆದಿದ್ದು, ಕರಿಕೆಯಿಂದ-ಮಡಿಕೇರಿವರೆಗೆ ಸರ್ವೆಯೇ ನಡೆದಿಲ್ಲ. ಇದಕ್ಕೆ ಸಂಸದರ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿದರು. ಈ ಭಾಗದ ಶಾಸಕರಾದ ಕೆ.ಜಿ. ಬೋಪಯ್ಯ ಅವರು ರಸ್ತೆ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ರಸ್ತೆ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸದೆ ಶಾಸಕರು ಗ್ರಾಮವನ್ನು ಪ್ರವೇಶಿಸಿದರೆ ಕಪ್ಪು ಬಾವುಟ ಪ್ರದರ್ಶಿಸಿ ಅಸಮಾಧಾನ ವ್ಯಕ್ತಪಡಿಸುವುದಾಗಿ ಎನ್. ಬಾಲಚಂದ್ರ ನಾಯರ್ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಎಸ್. ರಮಾನಾಥ್ ಮಾತನಾಡಿ, ಕರಿಕೆ ರಸ್ತೆಯು ಇಂಜಿನಿಯರ್ಗಳಿಗೆ ಆದಾಯಗಳಿಕೆಗೆ ಸುಗ್ಗಿ ಬೇಸಾಯದ ರಸ್ತೆಯಂತಾಗಿದ್ದು, ವರ್ಷಕ್ಕೆ ಮೂರು ಬಾರಿ ದುರಸ್ತಿ ಕಾರ್ಯದ ನಾಟಕವಾಡಲಾಗುತ್ತಿದೆ. ಈ ಭಾಗದ ಎಲ್ಲಾ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನಗಳು ಮಾತ್ರವಲ್ಲದೆ ಪಾದಚಾರಿಗಳಿಗೂ ಸಂಚರಿಸಲು ಸಾಧ್ಯವಾಗುತ್ತಿಲ್ಲವೆಂದು ತಿಳಿಸಿದರು.
ಗೋಷ್ಠಿಯಲ್ಲಿ ಕರಿಕೆ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಡಿ. ದೇವರಾಜು, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಜೆ. ಶರಣ್ಕುಮಾರ್ ಹಾಗೂ ಗ್ರಾ.ಪಂ. ಮಾಜಿ ಸದಸ್ಯ ಬಿ.ಕೆ. ಪುರುಷೋತ್ತಮ ಉಪಸ್ಥಿತರಿದ್ದರು.