ಶನಿವಾರಸಂತೆ, ನ. 13: ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಎಸ್.ಸಿ. ಶರತ್ಶೇಖರ್ ಅಧ್ಯಕ್ಷತೆಯಲ್ಲಿ ಕೃಷಿ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.
ಮಹಾಸಭೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ಹೆಚ್.ಇ. ದೊಡ್ಡಯ್ಯ ವಾರ್ಷಿಕ ವರದಿ ಮಂಡಿಸಿದರು. ಶನಿವಾರಸಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 1951 ರಲ್ಲಿ ಸ್ಥಾಪನೆಯಾಗಿದ್ದು, ಇದೀಗ ಸಂಘದಲ್ಲಿ ಒಟ್ಟು 2244 ಮಂದಿ ಸದಸ್ಯರಿದ್ದಾರೆ. ಸಂಘದ ಸದಸ್ಯರಿಂದ ರೂ. 1,19,04,256 ಪಾಲು ಹಣ ಹೊಂದಿರುತ್ತದೆ. ಸಂಘದಲ್ಲಿ ಸದಸ್ಯರು ಮತ್ತು ಸದಸ್ಯೇತರರಿಂದ ರೂ. 13,59,44,129 ಠೇವಣಿಯನ್ನು ಪಡೆಯಲಾಗಿದ್ದು, ಸಂಘವು ವಿವಿಧ ಸಾಲಗಳ ರೂಪದಲ್ಲಿ ಸದಸ್ಯರು ಮತ್ತು ಸದಸ್ಯೇತರರಿಗೆ ರೂ. 17,48,44,948 ಸಾಲ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಸಕ್ತ ಸಾಲಿಗೆ ಸಂಘವು ರೂ. 47,32,281 ನಿವ್ವಳ ಲಾಭಗಳಿಸಿದ್ದು, ಸಂಘದಲ್ಲಿ ಕಳೆದ ಮಹಾಸಭೆಯಿಂದ ಇಲ್ಲಿಯವರೆಗೆ 29 ಮಂದಿ ಮೃತಪಟ್ಟ ಸದಸ್ಯರ ವಾರಸುದಾರರಿಗೆ ತಲಾ ರೂ. 10 ಸಾವಿರ ಮರಣ ನಿಧಿಯನ್ನು ಪಾವತಿಸಲಾಗಿದೆ.
ಡಿವಿಡೆಂಡ್ ಫಂಡ್ ಶೇ. 17 ರಷ್ಟಿದ್ದ ಮೊತ್ತವನ್ನು ಶೇ. 20 ಕ್ಕೆ ಏರಿಕೆ ಮಾಡುವಂತೆ ತೀರ್ಮಾನಿಸಲಾಯಿತು. ಮಹಾಸಭೆಯಲ್ಲಿ ಸಂಘಕ್ಕೆ ನಬಾರ್ಡ್ ವತಿಯಿಂದ ರೂ. 3 ಕೋಟಿ ಸಾಲಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಯಿತು. ಹಣ ಮಂಜೂರಾದ ನಂತರ ಸಂಘದ ಕಟ್ಟಡ ನಿರ್ಮಿಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಸವಿತ ಸತೀಶ್, ಆಡಳಿತ ಮಂಡಳಿಯ ನಿರ್ದೇಶಕರು ಹಾಜರಿದ್ದರು.