ಕೂಡಿಗೆ, ನ. 13: ಸರಕಾರವು ವಸತಿ ರಹಿತರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಅರ್ಹ ಫಲಾನುಭವಿಗಳ ಆಯ್ಕೆಯನ್ನು ಆಯಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಯ್ಕೆ ಮಾಡಿ ಜಾಗವನ್ನು ಹೊಂದಿದ ಅರ್ಹ ಫಲಾನುಭವಿಗೆ ಮನೆ ಕಟ್ಟಿಕೊಳ್ಳಲು ಆದೇಶ ನೀಡಿ ತಳಮಟ್ಟದ ಕೆಲಸ ಮತ್ತು ಕೆಲವು ಮಂದಿ ಒಂದು ಭಾಗದ ಗೋಡೆಗಳ ನಿರ್ಮಾಣ ಕಾರ್ಯ ಮಾಡಿದ್ದಾರೆ. ಹೀಗೆ ನಾಲ್ಕು ವರ್ಷಗಳು ಕಳೆದರೂ ಯೋಜನೆ ಹಣ ಬಾರದೆ ಮನೆ ಕೆಲಸ ಅರ್ಧಕ್ಕೆ ನಿಂತುಹೋಗಿದೆ. ಇದರ ವಿಷಯವಾಗಿ ನೊಂದ ಫಲಾನುಭವಿಗಳು ಹೆಬ್ಬಾಲೆ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆಯನ್ನು ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 30 ಮನೆಗಳ ನಿರ್ಮಾಣಕ್ಕೆ ಆಯ್ಕೆಗೊಂಡ ಫಲಾನುಭವಿಗಳಿಗೆ ಮನೆಯ ನಿರ್ಮಾಣದ ಆದೇಶ ಪತ್ರವನ್ನು ನೀಡಲಾಗಿ ಮನೆ ಕಟ್ಟಲು ಅವಕಾಶ ದೊರಕಿತು. ಮನೆ ನಿರ್ಮಾಣದ ಬಿಲ್ ಮಾತ್ರ ನಾಲ್ಕು ವರ್ಷ ಕಳೆದರೂ ಸಹ ಬಂದಿರುವುದಿಲ್ಲ. ಇದಕ್ಕಾಗಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿಗೆ ತಿರುಗಿ ಸಾಕಾಗಿದೆ. ಅಧಿಕಾರಿಗಳ ಸ್ಪಂದನ ಇಲ್ಲದಾಗಿದೆ ಎಂದು ನೊಂದ ಫಲಾನುಭವಿಗಳಾದ ಹುಲುಸೆಯ ಸದಾಶಿವ, ಗೌರವ, ವೆಂಕಟೇಶ, ಹಕ್ಕೆ ಗ್ರಾಮದ ಗಿರಿಜ, ಹೆಬ್ಬಾಲೆಯ ಕುಮಾರ, ಮಂಜಪ್ಪ ಸೇರಿದಂತೆ ಇತರ ಫಲಾನುಭವಿಗಳು ತಿಳಿಸಿದ್ದಾರೆ.