ಮಡಿಕೇರಿ, ನ. 13: ವಿವಿಧ ಕಾರಣಗಳಿಂದ ಹೆತ್ತ ತಂದೆ-ತಾಯಿಗಳ ಕೈತಪ್ಪಿರುವ ಮಕ್ಕಳು ಹಾಗೂ ಸಣ್ಣಪುಟ್ಟ ವಿಷಯಗಳಿಂದ ಬೇರ್ಪಟ್ಟಿರುವ ದಂಪತಿಗಳಿಗೆ ನಗರದ ಬಾಲಭವನದ ಸಾಂತ್ವನ ಕೇಂದ್ರದ ಮೂಲಕ ನ್ಯಾಯ ಒದಗಿಸಲಾಗುತ್ತಿದೆ. ಕಳೆದ 18 ವರ್ಷಗಳಿಂದ ಹೆತ್ತವರಿಂದ ವಂಚಿತ ಮಕ್ಕಳು ಹಾಗೂ ನೊಂದ ಮಹಿಳೆಯರಿಗೆ ಶಿಶು ಕಲ್ಯಾಣ ಸಂಸ್ಥೆ ಮತ್ತು ಮಹಿಳಾ ಸಾಂತ್ವನ ಕೇಂದ್ರ ನ್ಯಾಯ ಕೊಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ಉಭಯ ಸಮಿತಿ ಅಧ್ಯಕ್ಷರುಗಳಾದ ಕೆದಂಬಾಡಿ ಪ್ರಕಾಶ್ ಹಾಗೂ ಕಲ್ಮಾಡಂಡ ಮೋಹನ್ ಮೊಣ್ಣಪ್ಪ ತಿಳಿಸಿದ್ದಾರೆ.
ಇಂದು ಬಾಲಭವನದಲ್ಲಿ ನಡೆದ ಸಮಿತಿ ಸಭೆಯ ಬಳಿಕ ‘ಶಕ್ತಿ’ಯೊಂದಿಗೆ ಮಾತನಾಡಿದ ಅವರುಗಳು, ಈ ಸಂಸ್ಥೆಯನ್ನು ಸಾಕಷ್ಟು ಅಭಿವೃದ್ಧಿಗೊಳಿಸುವುದರೊಂದಿಗೆ, ಸಾರ್ವಜನಿಕ ಚಟುವಟಿಕೆಗಳಿಗೂ ಸುಸಜ್ಜಿತ ಸಭಾಂಗಣ ಒದಗಿಸುತ್ತಿರುವುದಾಗಿ ವಿವರಿಸಿದರು. ಪ್ರಸಕ್ತ ಕಟ್ಟಡವನ್ನು ರೂ. 5.50 ಲಕ್ಷ ವೆಚ್ಚದಲ್ಲಿ ನವೀಕರಣ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯು ‘ಸಾಂತ್ವನ ಮಹಿಳಾ ಸಹಾಯವಾಣಿ’ಯನ್ನು ತಾ. 4.11.2002ರಿಂದ ಪ್ರಾರಂಭಿಸಿ ಜಿಲ್ಲೆಯಾದ್ಯಂತ ವಿವಿಧ ಸ್ತರದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವ ನೊಂದ ಮಹಿಳೆಯರ ಸಮಸ್ಯೆಗಳನ್ನು ಈಡೇರಿಸಿದೆ. ಅಂತಹವರ ದೂರನ್ನು ದಾಖಲಿಸಿಕೊಂಡು ತಕ್ಷಣಕ್ಕೆ ಸರಿಯಾದ ಸಲಹೆ ಮಾರ್ಗದರ್ಶನವನ್ನು ನೀಡಿ ನೆರವನ್ನು ಕಲ್ಪಿಸುತ್ತಾ ಬಂದಿದೆ.
ವಿವಿಧ ಪ್ರಕರಣಗಳಾದ ಗಂಡನಿಂದ ಹಿಂಸೆ, ಕೌಟುಂಬಿಕ ಹಿಂಸೆ, ಸಲಹಾ ಮಾರ್ಗದರ್ಶನ, ಕಾನೂನು ನೆರವು (ನ್ಯಾಯಾಲಯ) ಆಸ್ತಿಗಳಲ್ಲಿ ಕಿರುಕುಳ, ವರದಕ್ಷಿಣೆ, ಅತ್ಯಾಚಾರ, ಅಲ್ಪಾವಧಿ ವಸತಿ ಗೃಹ, ಪುನರ್ ವಸತಿ, ಉದ್ಯೋಗ, ಬಹು ಪತ್ನಿತ್ವ, ವಿದ್ಯಾಭ್ಯಾಸ, ವಿಚ್ಛೇಧನೆ, ವೃತ್ತಿತರಬೇತಿ ಇನ್ನಿತರ ರೀತಿಯಲ್ಲಿ ಸ್ಪಂದಿಸುತ್ತಾ ಬಂದಿದೆ.
ಈ ವರೆಗೆ ಸಾಂತ್ವನ ಕೇಂದ್ರ ಪ್ರಾರಂಭದ ವೇಳೆಯಿಂದ ಒಟ್ಟು 4082 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 4060 ಪ್ರಕರಣಗಳು ಇತ್ಯರ್ಥವಾಗಿದೆ. ಉಳಿದ 22 ಪ್ರಕರಣಗಳು ವಿಚಾರಣಾ ಹಂತದಲ್ಲಿವೆ. 2019-20ನೇ ಸಾಲಿನಲ್ಲಿ ಒಟ್ಟು 319 ಪ್ರಕರಣಗಳು ದಾಖಲಾಗಿದ್ದು, 301 ಪ್ರಕರಣಗಳು ಇತ್ಯರ್ಥವಾಗಿದೆ. 2020-21ನೇ ಸಾಲಿನಲ್ಲಿ 149 ಪ್ರಕರಣಗಳು ದಾಖಲಾಗಿದ್ದು, 129 ಪ್ರಕರಣಗಳು ಇತ್ಯರ್ಥವಾಗಿದೆ. ಉಳಿದ 20 ಪ್ರಕರಣಗಳು ಇತ್ಯರ್ಥದ ಹಂತದಲ್ಲಿವೆ.
ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಂಡ ಹಲವಾರು ಸಂಸಾರಗಳು ನೆಮ್ಮದಿಯ ಜೀವನವನ್ನು ಪಡೆದುಕೊಂಡಿರುವುದು ಶ್ಲಾಘನೀಯ. ಸಂಸ್ಥೆಯ ನೆರವು ಬಯಸುವವರು ಸಂಪರ್ಕಸಂಖ್ಯೆ 1091 ಅಥವಾ 229004ರಲ್ಲಿ ಸಂಪರ್ಕಿಸುವಂತೆ ಕೇಂದ್ರದ ಪ್ರಮುಖರು ಸಲಹೆ ನೀಡಿದ್ದಾರೆ.