ಚೆಟ್ಟಳ್ಳಿ, ನ. 13: ಚೆಟ್ಟಳ್ಳಿಯ ಕಾಫಿ ಸಂಶೋಧನಾ ಉಪಕೇಂದ್ರದ ವತಿಯಿಂದ ಕೇಂದ್ರದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಕಾರ್ಮಿಕ ವರ್ಗದ ವತಿಯಿಂದ ಚೆಟ್ಟಳ್ಳಿಯಲ್ಲಿ 2 ದಿನಗಳ ಸ್ವಚ್ಛತಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಕೇಂದ್ರದ ಉಪ ನಿರ್ದೇಶಕ ಡಾ. ಜಾರ್ಜ್ ಡ್ಯಾನಿಯಲ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಿಗೆ ಹಾಗೂ ಕಾರ್ಮಿಕರಿಗೆ ಚೆಟ್ಟಳ್ಳಿಯ ಕಾಫಿ ಸಂಶೋಧನಾ ಕೇಂದ್ರದಲ್ಲಿ ಸ್ವಚ್ಛತಾ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದರು. ಕಾಫಿ ಮಂಡಳಿಯಿಂದ ಚೆಟ್ಟಳ್ಳಿ ಪಟ್ಟಣದವರೆಗೆ ಹಾಗೂ ಕಂಡಕೆರೆಯವರೆಗೆ ರಸ್ತೆ ಬದಿಯಲ್ಲಿ ಬಿದ್ದಿರುವ ಕಸ ಹಾಗೂ ಪ್ಲಾಸ್ಟಿಕ್ ವಸ್ತುಗಳನೆಲ್ಲ ಹೆಕ್ಕಿ ಮಂಡಳಿಯ ಟ್ರ್ಯಾಕ್ಟರ್‍ನಲ್ಲಿ ಸಂಗ್ರಹಿಸಲಾಯಿತು. ಪಟ್ಟಣದಲ್ಲಿ ಕಸವನ್ನು ಸಾರ್ವಜನಿಕ ಸ್ಥಳದಲ್ಲಿ ಹಾಕದಂತೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಚೆಟ್ಪಳ್ಳಿ ಪಟ್ಟಣದಲ್ಲಿ ಗ್ರಾಮ ಪಂಚಾಯಿತಿ ಮೇಲ್ವಿಚಾರಕರು ಹಾಗೂ ಸಿಬ್ಬಂದಿಗಳು ಸಹಕಾರ ನೀಡಿದರು. ಸಂಗ್ರಹಿಸಿದ ಕಸವನ್ನು ಬೇರ್ಪಡಿಸಿ ಕಾಫಿ ಸಂಶೋದನಾ ಕೇಂದ್ರದ ಕಸ ಸಂಗ್ರಹ ಜಾಗದಲ್ಲಿ ಹಾಕಲಾಯಿತು.

ಕಳೆದ ವರ್ಷ ಚೆಟ್ಟಳ್ಳಿ ಕಾಫಿ ಮಂಡಳಿ ವತಿಯಿಂದ ಶಾಲಾ ಮಕ್ಕಳಿಗೆ ಸ್ವಚ್ಛತಾ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸುವ ಜಾಗೃತಿ ಕಾರ್ಯ ಕ್ರಮವನ್ನು ನಡೆಸಲಾಗಿತ್ತು. ಹಲವೆಡೆ ಸ್ವಚ್ಛತೆಯ ಅರಿವು ಮೂಡಿಸುವ ನಾಮಫಲಕಗಳನ್ನು ಹಾಕಲಾಗಿದೆ. ಕೇಂದ್ರದ ಆದೇಶದಂತೆ ತಾ. 1 ರಿಂದ ತಾ. 15 ರವರೆಗೆ ಸ್ವಚ್ಛ ಭಾರತ ಪಕ್ವಾಡ 2020ನಡಿ ಹಲವು ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.