ಪೆರಾಜೆ, ನ. 12: ಭಾರತೀಯ ಜನತಾ ಪಾರ್ಟಿ ಗ್ರಾಮ ಸಮಿತಿ ಪೆರಾಜೆ ಇದರ ಸಭೆಯು ಶಕ್ತಿ ಕೇಂದ್ರದ ಅಧ್ಯಕ್ಷ ನಂಜಪ್ಪ ನಿಡ್ಯಮಲೆ ಅವರ ಅಧ್ಯಕ್ಷತೆಯಲ್ಲಿ ಪೆರಾಜೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಸಭೆಯ ಮಾಸಿಕ ವರದಿ ಮತ್ತು ಲೆಕ್ಕಪತ್ರವನ್ನು ಕಾರ್ಯದರ್ಶಿ ಧನಂಜಯ ಮಂಡಿಸಿದರು. ಗ್ರಾಮದ ಕೆಲವು ಮೂಲಭೂತ ಸೌಕರ್ಯಗಳು ಸೇರಿದಂತೆ ಇತರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.
ಪಕ್ಷಕ್ಕೆ ಸೇರ್ಪಡೆ: ಬಿಜೆಪಿಯ ತತ್ವ ಸಿದ್ದಾಂತ ಹಾಗೂ ಗ್ರಾಮದ ಅಭಿವೃದ್ಧಿಯನ್ನು ಮೆಚ್ಚಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಜಗದೀಶ್ ಕುಂಬಳಚೇರಿ, ಶ್ರೀಧರ ಕುಂಡಾಡು, ಕುಂಞಣ್ಣ ನಾಯ್ಕ್ ಕರಿಭೂತನಕೋಡಿ ಇವರುಗಳು ಬಿಜೆಪಿ ಮಾಸಿಕ ಸಭೆಯಲ್ಲಿ ಕೊಡಗು ಜಿಲ್ಲಾ ಬಿಜೆಪಿ ಕೃಷಿ ಮೋರ್ಚಾದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದರು.
ಈ ಸಂದರ್ಭ ಶಕ್ತಿ ಕೇಂದ್ರದ ಸಹ ಪ್ರಮುಖ್ ಚಿನ್ನಪ್ಪ ಆಡ್ಕ, ತಾಲೂಕ್ ಕಾರ್ಯದರ್ಶಿ ಪ್ರಸನ್ನ ನೆಕ್ಕಿಲ, ಮಾಜಿ ಪಂಚಾಯತ್ ಅಧ್ಯಕ್ಷ ಹೊನ್ನಪ್ಪ ಅಮೆಚೂರ್ ಸೇರಿದಂತೆ, ಪ್ರಾ.ಕೃ.ಪ.ಸ. ಸಂಘದ ನಿರ್ದೇಶಕರು, ಪಕ್ಷದ ಕಾರ್ಯಕರ್ತರು ಇದ್ದರು.