ಕೂಡಿಗೆ, ನ. 12: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಮಾಜಿಕ ಲೆಕ್ಕ ಪರಿಶೋಧನೆ, ‘ನಮ್ಮ ಗ್ರಾಮ ನಮ್ಮ ಯೋಜನೆ -ಮಿಷನ್ ಅಂತ್ಯೋದಯ’ ಗ್ರಾಮ ಸಭೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನೋಡಲ್ ಅಧಿಕಾರಿಯಾಗಿರುವ ಹಾರಂಗಿ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ವರದರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕೈಗೊಂಡ ಕಾಮಗಾರಿಗಳ ಖರ್ಚು ವೆಚ್ಚದ ಮಾಹಿತಿಯನ್ನು ಗ್ರಾಮಸ್ಥರಿಗೆ ನೀಡಲಾಯಿತು. ನಂತರ 2019-20ನೇ ಸಾಲಿನ 14ನೇ ಹಣಕಾಸು ಯೋಜನೆಯ ಅಡಿಯಲ್ಲಿ ಕ್ರಿಯಾ ಯೋಜನೆ ಅನುಗುಣವಾಗಿ ತೆಗೆದುಕೊಂಡಿರುವ ವಿವಿಧ ಕಾಮಗಾರಿಗಳ ಮತ್ತು ವಿನಿಯೋಗಿಸಿದ ಹಣದ ವಿವರ ಹಾಗೂ ಕೈಗೊಳ್ಳಲಾದ ಕಾಮಗಾರಿಯ ಪಟ್ಟಿಯನ್ನು ಸಭೆಯಲ್ಲಿ ಮಂಡಿಸಲಾಯಿತು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ ಅವರು ಹೊಸ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತ ಈ ಸಾಲಿನಲ್ಲಿ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಈಗಿರುವ ಕಾಮಗಾರಿಗಳ ಜೊತೆಯಲ್ಲಿ ತೋಟಗಾರಿಕಾ ಬೆಳೆಗಳ ಅಭಿವೃದ್ಧಿಗೆ ಸಹಕಾರ ನೀಡುವ ಯೋಜನೆ ಇದ್ದು ಇದರ ಪ್ರಯೋಜನವನ್ನು ಗ್ರಾಮಸ್ಥರು ಪಡೆಯಬೇಕಾಗಿ ಮನವಿ ಮಾಡಿದರು. ಸಭೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯ ಗಣೇಶ್, ನೋಡಲ್ ಅಧಿಕಾರಿ ವರದರಾಜ ಯೋಜನೆಗಳ ಮಹತ್ವದ ಬಗ್ಗೆ ಮಾತನಾಡಿದರು.
ಈ ಸಂದರ್ಭ ತಾಲೂಕು ಸಾಮಾಜಿಕ ಲೆಕ್ಕ ಪರಿಶೋಧನಾ ಅಧಿಕಾರಿ ದಿನೇಶ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಂತೋಷ ಸೇರಿದಂತೆ ವ್ಯಾಪ್ತಿಯ ಗ್ರಾಮಸ್ಥರು ಭಾಗವಹಿಸಿದ್ದರು.