ವೀರಾಜಪೇಟೆ, ನ. 12: ಬಲಾತ್ಕಾರವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸಿ ನಿವೇಶನ ಮತ್ತು ಹಣದ ಆಮಿಶ ಒಡ್ಡಿ ಗ್ರಾಮಸ್ಥನ ಮೇಲೆ ಬೆದರಿಕೆ ಹಾಕಿರುವ ಘಟನೆಗೆ ಸಂಬಂಧಿಸಿದಂತೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಮ್ಮತ್ತಿ ಹೋಬಳಿ ಕಾರ್ಮಾಡು ಗ್ರಾಮದ ಶಿವಪ್ಪ ಎಂಬವರ ಪುತ್ರ ಮಂಜು ದೂರು ನೀಡಿದ್ದಾರೆ.
ಮಂಜು ವೃತ್ತಿಯಲ್ಲಿ ಚಾಲಕ ನಾಗಿದ್ದು, ಅಮ್ಮತ್ತಿ ಕಾರ್ಮಾಡು ಗ್ರಾಮದ ನಿವಾಸಿ. ತಾ. 8 ರಂದು ಮನೆಯ ಮುಂಭಾಗದಲ್ಲಿ ವಾಹನ ನಿಲ್ಲಿಸುವ ವೇಳೆ ಸಿದ್ದಾಪುರ ನೆಲ್ಯಹುದಿಕೇರಿ ನಲ್ವತೆಕ್ರೆ ನಿವಾಸಿ ವೀರ ಎಂಬಾತ ತನ್ನ ವಾಹನ ಬೊಲೇರೊ (ಕೆಎ-02-ಎಂಬಿ-9079) ರಲ್ಲಿ ಮತ್ತು ದ್ವಿಚಕ್ರ ವಾಹನ ಅಪಾಚಿಯಲ್ಲಿ (ಕೆಎ-12ಎಸ್-6241) ರಲ್ಲಿ ಶ್ವೇತ ವಸ್ತ್ರ ಧರಿಸಿದ್ದ ಮೂವರು ಮಹಿಳೆಯರು ಸೇರಿದಂತೆ ಮೂವರು ಪುರುಷರು ವಾಹನ ದಿಂದಿಳಿದು, ನನ್ನ ಬಳಿಗೆ ಆಗಮಿಸಿ ‘ನಿಮ್ಮ ಧರ್ಮ ಸುಳ್ಳು ನಮ್ಮ ದೇವರೆ ಸತ್ಯ ನಾವು ಕ್ರೈಸ್ತ ಮತಕ್ಕೆ ಸೇರಿದವರು, ನಮ್ಮ ಧರ್ಮಕ್ಕೆ ಸೇರು ನಿನಗೆ ಒಳ್ಳೇದಾಗುತ್ತದೆ. ನಿನಗೆ ಬೇಕಾದ ಎಲ್ಲಾ ಸೌಲಭ್ಯವನ್ನು ನಾವುಗಳು ಒದಗಿಸುತ್ತೇವೆ’ ಎಂದು ಹೇಳಿದ್ದಾರೆ.ನಂತರದಲ್ಲಿ ಪುಟ್ಟದಾದ ಬೈಬಲ್ ಕೈಯಲ್ಲಿಟ್ಟರು. ಇದನ್ನು ನಾನು ನಿರಾಕರಿಸಿದಾಗ. ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರೆ ನಿಮಗೆ 50,000 ನಗದು ಸೇರಿದಂತೆ ನಿವೇಶನ ಒದಗಿಸಿಕೊಡುತ್ತೇವೆ ಎಂದು ಹೇಳಿದರು.
(ಮೊದಲ ಪುಟದಿಂದ) ನಾನು ಒಲ್ಲೆ ಎಂದಾಗ ಎಲ್ಲಾ ಆಮಿಶಗಳನ್ನು ನಿರಾಕರಿಸಿದಾಗ ನನ್ನನು ಮತ್ತು ಕುಟುಂಬದವರನ್ನು ಬಲಾತ್ಕಾರವಾಗಿ ಮತಾಂತರ ಮಾಡುತ್ತೇವೆ, ಇದನ್ನು ಒಪ್ಪದೇ ಇತರರಿಗೆ ಮಾಹಿತಿ ಒದಗಿಸಿದಲ್ಲಿ ಕುಟುಂಬಕ್ಕೆ ಅಪಾಯ ಮಾಡುತ್ತೇವೆ ಎಂದು ಬೆದರಿಕೆ ಒಡ್ಡಿದ್ದಾರೆ. ಈ ಘಟನೆಯ ಆತಂಕದಿಂದ ಹಿಂದೂ ಜಾಗರಣ ವೇದಿಕೆ ಸಂಘಟನೆಯ ಬಳಿ ತಿಳಿಸಿದೆ. ನಂತರದಲ್ಲಿ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಮತಾಂತರ ನಡೆಸುವವನ ವಿರುದ್ಧ ಪ್ರಕರಣ ದಾಖಲು ಮಾಡಿದ್ದೇನೆ ಎಂದು ಮಂಜು ಘಟನೆಯ ವಿವರ ತಿಳಿಸಿದರು.
ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಿದ್ದಾಪುರ ನೆಲ್ಯಹುದಿಕೇರಿ ನಲ್ವತೆಕ್ರೆ ಗ್ರಾಮದ ವೀರ ಎಂಬವರ ಮೇಲೆ ಐ.ಪಿ.ಸಿ. 153(ಎ) 295(ಎ) ಮತ್ತು 506 ಬಲಾತ್ಕಾರದಿಂದ ಮತಾಂತರ ಮತ್ತು ಬೆದರಿಕೆ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಹೇಶ್ ಕೊಡಗಿನ ವಿವಿಧ ಸ್ಥಳಗಳಲ್ಲಿ ಧರ್ಮ ಮತಾಂತರವು ಅವ್ಯಾಹತವಾಗಿ ನಡೆಯುತ್ತಿದೆ. ಕಾಫಿ ತೋಟಗಳಲ್ಲಿ ಮತ್ತು ಹಾಡಿಗಳಲ್ಲಿ ಕೆಲಸ ಮಾಡುವ ಬಡ ಕಾರ್ಮಿಕರು ಮುಗ್ಧರನ್ನು ಗುರಿಯಾಗಿರಿಸಿಕೊಂಡು ಇಲ್ಲ ಸಲ್ಲದ ಆಮಿಶಗಳನ್ನೊಡ್ಡಿ ಮತಾಂತರ ಮಾಡುತ್ತಿರುವುದು ಕಂಡು ಬಂದಿದೆ. ಮತಾಂತರ ನಿಷೇಧ ಕಾಯ್ದೆ ಜಾರಿಯಾಗಬೇಕು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮತಾಂತರಿಗಳ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ವೀರಾಜಪೇಟೆ ತಾಲೂಕಿನ ಅಮ್ಮತ್ತಿ ಹೋಬಳಿಯ ಹೊಸೂರು, ಚೆನ್ನಯ್ಯನಕೋಟೆ, ಕಾರ್ಮಾಡು, ಮತ್ತು ಅಮ್ಮತ್ತಿ ಸೇರಿದಂತೆ ವಿವಿಧ ತೋಟಗಳ ಲೈನ್ ಮನೆಯ ಕಾರ್ಮಿಕರನ್ನು ಗುರಿಯಾಗಿರಿಸಿಕೊಂಡು ಹಲವು ತಿಂಗಳುಗಳಿಂದ ಧರ್ಮ ಪ್ರಚಾರ ಮತ್ತು ಮತಾಂತರ ಮಾಡುತ್ತಿರುವುದು ಖಂಡನೀಯ. ಧರ್ಮದ ಹೆಸರಿನಲ್ಲಿ ದೇವರನ್ನು ಅವಹೇಳನ ಮಾಡುವುದು, ಆಮಿಶಗಳನ್ನು ಒಡ್ಡುವ ಮೂಲಕ ಮತಾಂತರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳನ್ನು ಹಿಂದೂ ಜಾಗರಣಾ ವೇದಿಕೆ ಖಂಡಿಸುತ್ತದೆ. ಎಲ್ಲಾ ಹಿಂದೂ ಬಾಂಧವÀರು ಮತಾಂತರ ವಿರುದ್ಧ ಹೋರಾಟ ನಡೆಸಿದಲ್ಲಿ ಧರ್ಮ ಉಳಿಯುತ್ತದೆ ಎಂದು ಹೇಳಿದರು.
ದೂರು ನೀಡುವ ಸಂದರ್ಭದಲ್ಲಿ ಹಿಂದೂ ಜಾಗರಣಾ ವೇದಿಕೆಯ ತಾಲೂಕು ಅಧ್ಯಕ್ಷ ಯೋಗೇಶ್, ಪ್ರಧಾನ ಕಾರ್ಯದರ್ಶಿ ಅನಿಲ್ ಸಿದ್ದಾಪುರ, ಜಿಲ್ಲಾ ಪ್ರಚಾರ ಪ್ರಮುಖ ಕುಮಾರ್, ನಗರ ಪ್ರಮುಖ್ ಗಣೇಶ್ ಹಿಂದೂ ಜಾಗರಣ ವೇದಿಕೆಯ ಸದಸ್ಯರು ಹಾಜರಿದ್ದರು.
-ಅಮ್ಮಣಿಚಂಡ ಪ್ರವೀಣ್ ಚಂಗಪ್ಪ