ನಾಪೋಕ್ಲು, ನ. 12: ಜನ ಸಾಮಾನ್ಯರು ಅಗತ್ಯ ಕೆಲಸಗಳಿಗೆ ಕಂದಾಯಕಚೇರಿಗೆ ಹೋದರೆ, ಅಧಿಕಾರಿಗಳು ಸಿಬ್ಬಂದಿಗಳು ರಾಜಾರೋಸವಾಗಿಯೇ ಲಂಚ ಕೇಳುತ್ತಿದ್ದಾರೆ ಎಂದು, ನಾಗರಿಕರು ಶಾಸಕರ ಸಮ್ಮುಖದಲ್ಲೇ ಗಂಭೀರ ಆರೋಪ ಮಾಡಿದ ಪ್ರಕರಣ, ನಾಪೋಕ್ಲಿನಲ್ಲಿ ನಡೆದಿದೆ. ಪೌತಿ ಖಾತೆ ಆಂದೋಲನದ ಬಗ್ಗೆ ಗೊಂದಲಗಳಿದ್ದ ಹಿನ್ನೆಲೆಯಲ್ಲಿ, ಶಾಸಕ ಕೆ.ಜಿ. ಬೋಪಯ್ಯ ಸಮ್ಮುಖದಲ್ಲಿ ಇಂದು, ನಾಪೋಕ್ಲಿನಲ್ಲಿ ಸಾರ್ವಜನಿಕರ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಕಂದಾಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡಾ ಉಪಸ್ಥಿತರಿದ್ದರು.ಈ ವೇಳೆ ಸಮಸ್ಯೆಗಳ ಬಗ್ಗೆ ಶಾಸಕರ ಗಮನಕ್ಕೆ ತಂದ ನಾಗರಿಕರು, ಕಂದಾಯ ಅಧಿಕಾರಿಗಳು ಸಿಬ್ಬಂದಿಗಳು ಬೆರಳು ತೋರಿಸಿದ್ರೆ ಕೈಯನ್ನೇ ನುಂಗುತ್ತಿದ್ದಾರೆ ಎಂದು ಆರೋಪ ಮಾಡಿದರು. ಪಾಪದವರ ಕೈಯಿಂದ ಹಣತಿನ್ನುತ್ತಾರೆ. ಅವರ ಕೆಲಸಕ್ಕೆ ಕುತ್ತು ಬರುವುದು ಬೇಡ ಎಂಬ (ಮೊದಲ ಪುಟದಿಂದ) ಕಳಕಳಿಯಿಂದ ನಾವು ಎಸಿಬಿಗೆ ದೂರು ನೀಡಿಲ್ಲ. ಸಮಸ್ಯೆಯನ್ನು ಇವರೇ ಅರ್ಥ ಮಾಡಿಕೊಂಡು ಬದಲಾದರೆ ಸಂತೋಷ ಎಂದು ನಾಗರಿಕರು ಹೇಳಿದರು.
ಜನ ಸಾಮಾನ್ಯರ ಜೊತೆ ಕಂದಾಯ ಅಧಿಕಾರಿಗಳು ಸೌಜನ್ಯದಿಂದ ವರ್ತಿಸುತ್ತಿಲ್ಲ ಎಂದು ನಾಗರಿಕರೊಬ್ಬರು ದೂರಿದಾಗ, ನಿಗದಿತ ದೂರು ಇದ್ರೆ ಹೇಳಿ ಎಂದು ಬೋಪಯ್ಯ ಸಲಹೆ ಮಾಡಿದರು. ನಿಗದಿತ ಪ್ರಕರಣವನ್ನು ನಾವು ಹೇಳಬಹುದು ಸಾರ್. ಆದರೆ, ನಾವೇ ಟಾರ್ಗೆಟ್ ಆಗುವುದು ಬೇಡ ಎಂದು ನಾಗರಿಕರು ಹೇಳಿದರು.
ಅಮಾಯಕ ರೈತರು ಕಂದಾಯ ಕಚೇರಿಗೆ ಬಂದು, ತಮ್ಮ ಕೆಲಸವಾಯ್ತೆಂಬ ಖುಷಿಯಲ್ಲಿ ಹಣ ನೀಡುತ್ತಾರೆ. ಆದರೆ, ಎಲ್ಲರಿಂದಲೂ ಬಾಯಿಬಿಟ್ಟು ಹಣ ಕೇಳುವುದು ಸರಿಯೇ? ಒಂದು ವೇಳೆ ಹಣ ನೀಡದಿದ್ರೆ, ಅಮೂಲ್ಯ ಕಡತಗಳನ್ನೇ ನಾಪತ್ತೆ ಮಾಡಿ ಸತಾಯಿಸಲಾಗುತ್ತಿದೆ ಎಂಬ ಗಂಭೀರ ಆರೋಪವೂ ಸಭೆಯಲ್ಲಿ ವ್ಯಕ್ತವಾಯಿತು.
ಲಂಚ ನೀಡದಿದ್ದರೆ ಕಡತವನ್ನೇ ಮಾಯ ಮಾಡಿ, ಮತ್ತೆ ಅಲೆದಾಡಿಸುತ್ತಾರೆ. ಕೈಯಲ್ಲಿ ಹಣಕೊಟ್ಟರೆ ಮಾತ್ರ ಕಡತ ವಿಲೇವಾರಿಯಾಗುತ್ತದೆ. ಕಂದಾಯ ಇಲಾಖೆಯ ಬಗ್ಗೆಯೇ ನಾಚಿಕೆಯಾಗುತ್ತದೆ ಎಂದು ಜನರು ಆರೋಪ ಮಾಡಿದರು.
ಈ ವೇಳೆ ಶಾಸಕ ಬೋಪಯ್ಯ ಪೌತಿ ಖಾತೆ ಆಂದೋಲನದ ಬಗ್ಗೆ ಸರ್ಕಾರ ಹೊರಡಿಸಿರುವ ಸುತ್ತೋಲೆಯ ಬಗ್ಗೆ ಜನರಿಗೆ ಮನವರಿಕೆ ಮಾಡಿದರು. ಯಾವುದೇ ಗೊಂದಲಕ್ಕೆ ಆಸ್ಪದವಾಗದಂತೆ ಸುಲಭ ರೀತಿಯಲ್ಲಿ ಪೌತಿಖಾತೆ ಮಾಡಿಸಿಕೊಳ್ಳಲು ಅವಕಾಶವಿದೆ ಎಂದು ಮನದಟ್ಟು ಮಾಡಿದರು.
ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಬೋಪಯ್ಯ, ಕೆಲವು ಇಲಾಖೆಗಳಿಂದ ಜನರಿಗೆ ತೊಂದರೆಯಾಗುತ್ತಿದ್ದು, ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತಿಲ್ಲ ಎಂಬ ದೂರುಗಳಿವೆ. ಈ ಹಿನ್ನೆಲೆಯಲ್ಲಿ ಖುದ್ದಾಗಿ ನಾಪೋಕ್ಲಿಗೆ ಬಂದು ಸಭೆ ಕರೆದು ಚರ್ಚಿಸಲಾಗಿದೆ. ವ್ಯವಸ್ಥೆಯನ್ನು ಸರಿ ಮಾಡಬೇಕಿದ್ದು, ಉತ್ತಮ ಆಡಳಿತ ನೀಡಬೇಕೆಂಬ ಸರ್ಕಾರದ ಸದುದ್ದೇಶÀ ಈಡೇರಬೇಕಿದೆ. ಸ್ಥಳೀಯ ಕೆಲವು ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳನ್ನು ಕರೆಸಿ ಸೂಚನೆಗಳನ್ನು ನೀಡಲಾಗಿದೆ. ಮುಂದೆ ವ್ಯವಸ್ಥೆ ಸರಿಯಾಗುತ್ತದೆ ಎಂಬ ವಿಶ್ವಾಸವಿದೆ ಎಂದರು. ವ್ಯವಸ್ಥೆ ಮತ್ತೆ ಹದಗೆಟ್ಟರೆ ಜಿಲ್ಲಾಧಿಕಾರಿಗಳನ್ನೇ ಕರೆಸಿ ಸೂಚನೆ ಕೊಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಚರ್ಚೆಯಲ್ಲಿ ನಿವೃತ್ತ ಸೈನಿಕ ಕೇಟೋಳಿರ ಡಾಲಿ ಅಪ್ಪಚ್ಚ, ಫಿರೋಜ್ ಗಣಪತಿ, ವಿಎಸ್ಸೆಸ್ಸೆನ್ ಮಾಜಿ ಅಧ್ಯಕ್ಷ ನೂರಂಬಾಡ ಉದಯಶಂಕರ್, ಕುಂಡ್ಯೋಳಂಡ ವಿಷು ಪೂವಯ್ಯ, ಅರೆಯಡ ರತ್ನ ಪೆಮ್ಮಯ್ಯ, ಕೆಲೇಟಿರ ದೀಪು ದೇವಯ್ಯ ಮತ್ತಿತರರು ಪಾಲ್ಗೊಂಡಿದ್ದರು.
ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಪಾಡಿಯಮ್ಮಂಡ ಮುರುಳಿ ಕರುಂಬಮಯ್ಯ, ಹಾಪ್ಕಾಮ್ಸ್ ನಿರ್ದೇಶಕ ಬಿದ್ದಾಟಂಡ ರಮೇಶ್ಚಂಗಪ್ಪ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ನಾಪೋಕ್ಲು ಬಿಜೆಪಿ ಶಕ್ತಿ ಕೇಂದ್ರದ ಸಂಚಾಲಕ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ತಾಲೂಕು ಕೃಷಿ ಮೋರ್ಚಾ ಅಧ್ಯಕ್ಷ ಶಿವಚಾಳಿಯಂಡ ಜಗದೀಶ್, ವಿಎಸ್ಸೆಸ್ಸೆನ್ ಅಧ್ಯಕ್ಷ ಅರೆಯಡ ಅಶೋಕ್, ಬಿಜೆಪಿ ಕಾರ್ಯದರ್ಶಿ ಪಾಡಿಯಮ್ಮಂಡ ಮನು ಮಹೇಶ್, ಉಪ ತಹಶೀಲ್ದಾರ್ ಸಿದ್ಧರಾಜು, ಕಂದಾಯ ನಿರೀಕ್ಷಕ ಶಿವಕುಮಾರ್, ಗ್ರಾಮ ಲೆಕ್ಕಿಗ ಜನಾರ್ಧನ್ ಮತ್ತಿತರರು ಉಪಸ್ಥಿತರಿದ್ದರು. -ದುಗ್ಗಳ ಸದಾನಂದ