ಸುಂಟಿಕೊಪ್ಪ, ನ. 11: ಸುಂಟಿಕೊಪ್ಪ ಹೋಬಳಿಯ ಕಂದಾಯ ಇಲಾಖೆಯ ಪೌತಿ ಖಾತೆ ಬದಲಾವಣೆ ಆಂದೋಲನದ ಕಾರ್ಯಕ್ರಮಕ್ಕೆ ಉಪತಹಶೀಲ್ದಾರ್ ಶುಭಾ ಕೆ., ಕಂದಾಯ ಪರಿವೀಕ್ಷಕ ಶಿವಪ್ಪ ಅವರು ಚಾಲನೆ ನೀಡಿದರು.

ಕಂದಾಯ ಪರಿವೀಕ್ಷಕ ಶಿವಪ್ಪ ಮಾತನಾಡಿ, ಸರಕಾರದ ಸವತ್ತುಗಳು ಹಲವು ಮಂದಿಗೆ ಇಂದಿಗೂ ಪೌತಿ ಖಾತೆಗೊಳ್ಳದೆ ದೊರಕುತ್ತಿಲ್ಲ; ಕೃಷಿಕರಿಗೆ ಪೌತಿ ಖಾತೆಯನ್ನು ಮನೆ ಮನೆಗೆ ತಲುಪಿಸುವ ಕೆಲಸ ಆಗಬೇಕು. ಉಪತಹಶೀಲ್ದಾರರು, ಕಂದಾಯ ಪರಿವೀಕ್ಷಕರು, ಗ್ರಾಮಲೆಕ್ಕಿಗರು ಹಾಗೂ ಗ್ರಾಮ ಸಹಾಯಕರು ಒಗ್ಗೂಡಿ ಕೃಷಿಕರ ಅರ್ಜಿಯನ್ನು ಸ್ವೀಕರಿಸಿ ಒಂದೇ ದಿನದಲ್ಲಿ ಈ ಕೆಲಸ ಮಾಡಿಕೊಡ ಲಾಗುವುದು. ಪಲಾನುಭವಿಗಳು ಅರ್ಜಿಯೊಂದಿಗೆ ಕುಟುಂಬ ಸದಸ್ಯರುಗಳ ಮರಣ ದೃಢೀಕರಣ ಪತ್ರ, ಪಹಣಿ ಪತ್ರ, ವಂಶಾವಳಿ ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡುಗಳನ್ನು ಲಗತ್ತಿಸಿ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಹೇಳಿದರು.

ಉಪತಹಶೀಲ್ದಾರ್ ಶುಭಾ ಕೆ. ಮಾತನಾಡಿ, ಸರಕಾರದ ಯಾವುದೇ ಸವಲತ್ತುಗಳನ್ನು ಪಡೆದುಕೊಳ್ಳ ಬೇಕೆಂದರೆ ದಾಖಲಾತಿಗಳನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದರೆ ಮಾತ್ರ ಸಾಧ್ಯವಾಗಲಿದೆ. ಹಲವು ಕೃಷಿ ಜಮೀನು ತಮ್ಮ ಕುಟುಂಬದ ಹಿರಿಯರ ಹೆಸರಿನಲ್ಲಿಯೇ ಉಳಿದು ಕೊಂಡಿದ್ದು; ಅವರ ಮರಣ ದೃಢೀಕರಣ ಪತ್ರ ಹಾಗೂ ಇನ್ನಿತರ ದಾಖಲಾತಿಗಳನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಲು ಸರಕಾರ ಅವಕಾಶ ನೀಡಿದೆ ಎಂದು ಹೇಳಿದರು.

ಹೆರೂರು, ನಾಕೂರು, ಕಾನ್‍ಬೈಲ್, ಬೈಚನಹಳ್ಳಿ, ಅಂದಗೋವೆ ಈ ವಿಭಾಗದ ಪಲಾನುಭವಿಗಳು ಆಂದೋಲನದಲ್ಲಿ ಭಾಗವಹಿಸಿ ಪೌತಿ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೊಡಗರಹಳ್ಳಿ ಗ್ರಾ.ಪಂ. ಪಿಡಿಓ ಗಿರೀಶ್, ಗ್ರಾಮಲೆಕ್ಕಿಗರಾದ ರೂಪಶ್ರೀ, ಟಿ.ಎಂ. ನಸೀಮಾ, ನಾಗೇಂದ್ರ, ಡಾಪ್ನ ಡಿ. ಕೋಸ್, ಚಂದನ, ಆಶಾ, ದೀಪಿಕಾ ಹಾಗೂ ಗ್ರಾಮ ಸಹಾಯಕ ಶಿವಪ್ಪ ಸೇರಿದಂತೆ ಗ್ರಾಮಸ್ಥರು ಇದ್ದರು.