*ಸಿದ್ದಾಪುರ, ನ. 11: ಜಿಲ್ಲೆಯ ವಿವಿಧ ಹಾಡಿಗಳಲ್ಲಿ ನೆಲೆಸಿರುವ ಆದಿವಾಸಿಗಳನ್ನು ಆಮಿಷಕ್ಕೊಳಪಡಿಸಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸ ಲಾಗುತ್ತಿದ್ದು, ಇದನ್ನು ವಿರೋಧಿಸಿರುವ ಆದಿವಾಸಿಗಳ ಮುಖಂಡ, ಚೆನ್ನಯ್ಯನಕೋಟೆ ಗ್ರಾ.ಪಂ. ಸದಸ್ಯ ಜೆ.ಕೆ. ಅಪ್ಪಾಜಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ.
ಆದಿವಾಸಿಗಳ ಪರಂಪರೆ ಉಳಿಯ ಬೇಕೆಂಬ ನಿಟ್ಟಿನಲ್ಲಿ ಹಿಂದಿನಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಇದೀಗ ಆಸೆ-ಆಮಿಷ ಕ್ಕೊಳಗಾಗಿ ಆದಿವಾಸಿಗಳು ಮತಾಂತರ ಗೊಳ್ಳುತ್ತಿದ್ದಾರೆ. ಆದಿವಾಸಿಗಳ ಸಂಪ್ರದಾಯ ಉಳಿಸಿಕೊಳ್ಳುವ ಸಲುವಾಗಿ ಮತಾಂತರಗೊಳ್ಳುವ ಆದಿವಾಸಿಗಳಿಗೆ ಯಾವುದೇ ಸರಕಾರದ ಸವಲತ್ತುಗಳನ್ನು ನೀಡಬಾರದು. ಈಗಾಗಲೇ ನೀಡಿರುವ ಸವಲತ್ತುಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ತಾ. 23 ರಿಂದ ಜಿಲ್ಲಾಧಿಕಾರಿ ಗಳ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಅಪ್ಪಾಜಿ ತಿಳಿಸಿದ್ದಾರೆ.
ಆದಿವಾಸಿಗಳು ಮತಾಂತರ ಗೊಳ್ಳುತ್ತಿರುವ ಬಗ್ಗೆ ‘ಶಕ್ತಿ’ ಕಳೆದ ತಾ. 30ರ ಸಂಚಿಕೆಯಲ್ಲಿ ಬೆಳಕು ಚೆಲ್ಲಿತ್ತು. ಆದರೂ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಮತಾಂತರ ಮಾಡುತ್ತಿರುವವರ ಮೇಲೆ ಯಾವುದೇ ಕ್ರಮಕೈಗೊಳ್ಳದಿರುವುದು ವಿಷಾದನೀಯ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವುದ ರೊಂದಿಗೆ ಆದಿವಾಸಿಗಳ ಮತಾಂತರ ವನ್ನು ತಡೆಯಬೇಕೆಂದು ಒತ್ತಾಯಿಸಿದ್ದಾರೆ.