ಪೆರಾಜೆ, ನ. 10 : ಭಾರತೀಯ ಜನತಾ ಪಾರ್ಟಿ ಮಡಿಕೇರಿ ತಾಲೂಕು ಗ್ರಾಮಾಂತರ ಯುವ ಮೋರ್ಚಾ ಇದರ ವತಿಯಿಂದ ವ್ಯಸನ ಮುಕ್ತ - ಸ್ವಚ್ಛ ಪರಿಸರಯುಕ್ತ ಸಮಾಜ ನಿರ್ಮಾಣಕ್ಕಾಗಿ ಡ್ರಗ್ಸ್ ಮುಕ್ತ ಭಾರತ ಎಂಬ ಕಾರ್ಯಕ್ರಮದ ಮೂಲಕ ದೇಶಾದ್ಯಂತ ಡ್ರಗ್ಸ್ , ಮದ್ಯಪಾನ, ಧೂಮಪಾನ ಹಾಗೂ ಇದರಿಂದ ಆಗುವ ಆರೋಗ್ಯ ಪರಿಣಾಮಗಳು, ಮತ್ತು ಕಾನೂನು ಅರಿವನ್ನು ವಿದ್ಯಾರ್ಥಿ, ಯುವಜನಾಂಗ ಸೇರಿದಂತೆ ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸುವ ಕಾರ್ಯಕ್ರಮವು ಪೆರಾಜೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ತಾಲೂಕು ಗ್ರಾಮಾಂತರ ಯುವ ಮೋರ್ಚಾದ ಅಧ್ಯಕ್ಷ ಹೇಮಂತ್ ತೋರೆರ ವಹಿಸಿ ಪ್ರಾಸ್ತಾವಿಕ ಮಾತನಾಡಿದರು.

ಕಾರ್ಯಕ್ರಮದಲ್ಲಿ ಡ್ರಗ್ಸ್ ಮದ್ಯಪಾನ ಧೂಮಪಾನಗಳಿಂದಾಗುವ ಆರೋಗ್ಯ ಪರಿಣಾಮಗಳು ಎಂಬ ವಿಷಯದ ಬಗ್ಗೆ ಕೆ.ವಿ.ಜಿ. ಮೆಡಿಕಲ್ ಕಾಲೇಜು ಮನೋವೈದ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಪೂನಂ ಮೋಂಟಡ್ಕ ಮಾತನಾಡಿ ಪ್ರಸ್ತುತ ಕಾಲಘಟ್ಟದಲ್ಲಿ ಡ್ರಗ್ಸ್ ಮದ್ಯಪಾನದಂತ ಪಿಡುಗಿನಿಂದ ಆರೋಗ್ಯ ಪರಿಣಾಮಗಳು ಜೊತೆಗೆ ಮನೆಗಳಲ್ಲಿ ಆಗುವ ಕೌಟುಂಬಿಕ ಸಮಸ್ಯೆಗಳ ಬಗ್ಗೆ ವಿವರಿಸುತ್ತ ಸಭಿಕರ ಸಂದೇಹಗಳಿಗೆ ಸಮರ್ಪಕವಾದ ರೀತಿಯ ಉತ್ತರ ನೀಡಿ ಯುವ ಸಮೂಹ ಸೇರಿದಂತೆ ಸಾರ್ವಜನಿಕರಿಗೆ ಉತ್ತಮ ಸಂದೇಶವನ್ನು ನೀಡಿದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಕೊಡಗು ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಮಾತನಾಡಿ ಓದು, ಬರಹಗಳ ಜೊತೆಗೆ ಕೃಷಿ, ಹೈನುಗಾರಿಕೆ ಕ್ಷೇತ್ರದಲ್ಲಿ ಯುವಕರು ತಮ್ಮನ್ನು ತಾವು ತೊಡಗಿಸಿಕೊಂಡು ಡ್ರಗ್ಸ್ ಎಂಬ ಮಹಾ ಮಾರಿಯನ್ನು ಹೊಡೆದೋಡಿಸಬೇಕು ಎಂದು ಕರೆ ನೀಡಿದರು. ಕೊಡಗು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ದರ್ಶನ್ ಜೋಯಪ್ಪ ಪಕ್ಷದ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.

ಈ ಕಾರ್ಯಕ್ರಮದಲ್ಲಿ ಪೆರಾಜೆ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರಾದ ನಂಜಪ್ಪ ನಿಡ್ಯಮಲೆ , ಚಿನ್ನಪ್ಪ ಅಡ್ಕ, ಮಡಿಕೇರಿ ತಾಲೂಕು ಬಿಜೆಪಿ ಕಾರ್ಯದರ್ಶಿ ಪ್ರಸನ್ನ ನೆಕ್ಕಿಲ, ಸೇರಿದಂತೆ ಪಕ್ಷದ ಜಿಲ್ಲಾ ಹಾಗೂ ತಾಲೂಕು ನಾಯಕರು ಭಾಗವಹಿಸಿದ್ದರು. ಸಾರ್ವಜನಿಕರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಾಗಾರದ ಮಾಹಿತಿಯನ್ನು ಪಡೆದುಕೊಂಡರು.

ದೀಪಕ್ ಮಜಿಕೋಡಿ ಪ್ರಾರ್ಥಿಸಿ, ಮಡಿಕೇರಿ ತಾಲೂಕು ಗ್ರಾಮಾಂತರ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಹೇಶ ಮೂಲೆಮಜಲು ಸ್ವಾಗತಿಸಿ, ಮಾಜಿ ಪಂಚಾಯತ್ ಸದಸ್ಯ ಉದಯಚಂದ್ರ ಕುಂಬಳಚೇರಿ ವಂದಿಸಿದರು.