ಮಡಿಕೇರಿ, ನ. 10: ಕಳೆದ ಬಾರಿ ನಡೆದಿದ್ದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ಸಂಬಂಧ ಇಂದು ಏರ್ಪಡಿಸಿದ್ದ ಸಾಮಾನ್ಯ ಸಭೆಗೆ ನೀಡ ಲಾಗಿದ್ದ ನಡಾವಳಿ ಅನುಪಾಲನಾ ವರದಿಯಲ್ಲಿ ಅನುಪಾಲನಾ ವರದಿ ಅಪೂರ್ಣವಾಗಿದ್ದ ಬಗ್ಗೆ ಜಿಲ್ಲಾ ಪಂಚಾಯತ್ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿ ಆಕ್ರೋಶಗೊಂಡ ಘಟನೆ ನಡೆಯಿತು.ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ. ಹರೀಶ್ ಅಧ್ಯಕ್ಷತೆಯಲ್ಲಿ ಜಿ.ಪಂ. ಭವನದಲ್ಲಿ ಆಯೋಜಿಸಲಾಗಿದ್ದ ಸಾಮಾನ್ಯ ಸಭೆಯಲ್ಲಿ ಸದಸ್ಯ ಪ್ರಥ್ಯು ಅವರು ಕಳೆದ ಬಾರಿ ಜುಲೈ 30 ರಂದು ನಡೆದ ಸಭೆಯ ಕುರಿತಾದ ವರದಿಯಲ್ಲಿ ಸದಸ್ಯರುಗಳು ಕೇಳಿದ ಪ್ರಶ್ನೆಗಳ ಬಗ್ಗೆ ಪ್ರಸ್ತಾಪವಾಗಿದೆ ಹೊರತು ಆ ಸಂಬಂಧÀ ಕೈಗೊಂಡಿರುವ ಕ್ರಮಗಳ ಬಗ್ಗೆ ಅನುಪಾಲನಾ ವರದಿಯಲ್ಲಿ ಯಾವದೇ ಉಲ್ಲೇಖ ಮಾಡದೆ ಖಾಲಿ ಬಿಡಲಾಗಿದೆ. ಸದಸ್ಯರುಗಳು ಚರ್ಚಿಸಿದ ವಿಷಯ ಸಂಬಂಧ ಅಧಿಕಾರಿಗಳು ಯಾವ ರೀತಿ ಕಾರ್ಯ ಪ್ರವೃತ್ತರಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡದೆ ಸುಮಾರು ಆರೇಳು ಪುಟಗಳಲ್ಲಿ ಖಾಲಿ ಬಿಡಲಾಗಿದೆ. ಈ ಕ್ರಮ ಸರಿಯೇ ಎಂದು ಪ್ರಶ್ನಿಸಿದರು. ಇದಕ್ಕೆ ಸದಸ್ಯರುಗಳಾದ ಮುರಳಿ ಕರುಂಬಮ್ಮಯ್ಯ, ವಿಜು ಸುಬ್ರಮಣಿ ಧನಿಗೂಡಿಸಿದರು. ಸದಸ್ಯರ ಚರ್ಚೆಗೆ ಕೈಗೊಂಡ ಕ್ರಮಗಳ ಬಗ್ಗೆ ಪ್ರಸ್ತಾಪಿಸದೆ ಖಾಲಿ ಬಿಟ್ಟ ವರದಿಯನ್ನು ನೀಡಿದರೆ ಅದರ ಅವಶ್ಯಕತೆಯಾದರೂ ಸಭೆಗೆ ಏನಿದೆ ಎಂದು ವರದಿಯನ್ನು ಎಸೆದ ಮುರಳಿ ಕರುಂಬಮ್ಮಯ್ಯ ಅಧಿಕಾರಿಗಳ ಈ ಕ್ರಮ ಸರಿಯಲ್ಲ ಎಂದು ಕಿಡಿಕಾರಿದರು.
ವಿಜು ಸುಬ್ರಮಣಿ ಮಾತನಾಡಿ, ವರದಿಯನ್ನು ಸಭೆಗೆ ಒಪ್ಪಿಸುವ ಮೊದಲು ಸಿಇಓ ಅವರು ಪರಿಶೀಲಿಸಿದ್ದರೆ ಈ ಅವಾಂತರ ವಾಗುತ್ತಿರಲಿಲ್ಲ ಎಂದರು. ಈ ಬಗ್ಗೆ ಅಧ್ಯಕ್ಷ ಹರೀಶ್ ಮುಖ್ಯ ಯೋಜನಾಧಿಕಾರಿ ಶ್ರೀಕಂಠ ಮೂರ್ತಿ ಅವರ ಬಳಿ ಸ್ಪಷ್ಟನೆ ಬಯಸಿದಾಗ, ಸದಸ್ಯರು ಚರ್ಚಿಸಿದ ವಿಷಯ ಹಾಗೂ ಪ್ರಶ್ನೆಗಳ ಸಂಬಂಧ ಈಗಾಗಲೇ ಕ್ರಮಕೈಗೊಂಡಿರುವ ಹಿನ್ನೆಲೆಯಲ್ಲಿ ಅನುಪಾಲನಾ ವರದಿಯನ್ನು ಖಾಲಿ ಬಿಡಲಾಗಿದೆ ಎಂದು ಉತ್ತರಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪ್ರಥ್ಯು ಕ್ರಮಕೈಗೊಳ್ಳಲಾಗಿದೆ ಎಂದು ತಪ್ಪು ಮಾಹಿತಿ ನೀಡಬೇಡಿ ಒಂದು ವೇಳೆ ಕ್ರಮಕೈಗೊಂಡರೂ; ಕೈಗೊಳ್ಳದಿದ್ದರೂ ಅನುಪಾಲನಾ ವರದಿಯಲ್ಲಿ ಪ್ರಸ್ತಾಪಿಸಬೇಕಿರುವದು ನಿಮ್ಮ ಕರ್ತವ್ಯ ಎಂದು ಹೇಳಿದರಲ್ಲದೆ, ಕಳೆದ ಸಭೆಯಲ್ಲಿ ಸದಸ್ಯ ಶಿವು ಮಾದಪ್ಪ ಅವರು ಪ್ರಸ್ತಾಪಿಸಿದ್ದ ಹಳೆಯ ಸೇತುವೆ ಕುರಿತಾದ ಪ್ರಶ್ನೆ ಹಾಗೂ ಉತ್ತರ ಎರಡನ್ನು ಕೂಡ ಇಂದಿನ ವರದಿಯಲ್ಲಿ ಕೈಬಿಡಲಾಗಿದ್ದು, ಹಾರಿಕೆಯುತ್ತರ ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಈ ಬಗ್ಗೆ ಕೆಲಹೊತ್ತು ಚರ್ಚೆ ನಡೆದ ಬಳಿಕ ಅನುಪಾಲನಾ ವರದಿಗೆ ಮಾಹಿತಿ ನೀಡದ ಅಧಿಕಾರಿಗಳಿಗೆ ನೋಟೀಸ್ ನೀಡುವಂತೆ ಸಿಇಓ ಭಂವರ್ ಸಿಂಗ್ ಮೀನಾ ಸೂಚಿಸಿದರು. ಮಾತ್ರವಲ್ಲದೆ ತಪ್ಪು ಯಾರದೆಂದು ಪರಿಶೀಲಿಸಿ ಮಾಹಿತಿ ನೀಡುವಂತೆ ಸೂಚಿಸಿದರು.
ಶಾಲೆಗಳನ್ನು ತೆರೆಯದಂತೆ ಶಿಫಾರಸ್ಸು
ಸದಸ್ಯ ಶಿವುಮಾದಪ್ಪ ಮಾತನಾಡಿ ಕೊರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವದು; ಕಡ್ಡಾಯ ಮಾಸ್ಕ್ ಧರಿಸಬೇಕೆಂಬ ನಿಯಮಗಳು ಹಲವೆಡೆ ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ. ಹೀಗಿರುವಾಗ ಶಾಲೆಗಳು ತೆರೆಯಲ್ಪಟ್ಟರೆ ಮಕ್ಕಳು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ ಎಂಬದು ಸಂಶಯ ಎಂದರಲ್ಲದೆ ಈ ಹಿನ್ನೆಲೆಯಲ್ಲಿ ಮಕ್ಕಳ ಹಿತದೃಷ್ಟಿಯಿಂದ ಕೊರೊನಾ ಸೋಂಕಿಗೆ ಲಸಿಕೆ ಕಂಡು ಹಿಡಿಯುವವರೆಗೂ ಕೊಡಗಿನಲ್ಲಿ ಶಾಲೆಗಳನ್ನು ತೆರೆಯದಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಿದರು. ಸದಸ್ಯರುಗಳಾದ ಪ್ರಥ್ಯು ಹಾಗೂ ಮುರಳಿ ಕರುಂಬಮ್ಮಯ್ಯ ಅವರು ಕೂಡ ಇದಕ್ಕೆ ಸಹಮತ ವ್ಯಕ್ತಪಡಿಸಿದರು. ಈ ಬಗ್ಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ನಿರ್ಣಯ ದಾಖಲಿಸುವಂತೆ ಅಧ್ಯಕ್ಷ ಹರೀಶ್ ಸೂಚಿಸಿದರು.
ಶುಲ್ಕಕ್ಕೆ ಒತ್ತಾಯಿಸುವಂತಿಲ್ಲ
ಕೊರೊನಾ ಸಂಕಷ್ಟದ ನಡುವೆಯೂ ಜಿಲ್ಲೆಯಲ್ಲಿ ಹಲವು ಖಾಸಗಿ ಶಾಲೆಗಳು ಶಾಲಾ ಶುಲ್ಕ ಪಾವತಿಸುವಂತೆ ಪೋಷಕರಿಗೆ ಒತ್ತಡ ಹೇರುತ್ತಿರುವದಲ್ಲದೆ, ಶುಲ್ಕ ಪಾವತಿಸದ ಮಕ್ಕಳಿಗೆ ಆನ್‍ಲೈನ್ ತರಗತಿ ನಿಲ್ಲಿಸುತ್ತಿದ್ದಾರೆ ಎಂದು ಸದಸ್ಯ ಸಿ.ಕೆ. ಬೋಪಣ್ಣ ಪ್ರಸ್ತಾಪಿಸಿದರು. ವಿಜು ಸುಬ್ರಮಣಿ, ಪ್ರಥ್ಯು, ಶಿವುಮಾದಪ್ಪ ಮಂಜುಳಾ,
(ಮೊದಲ ಪುಟದಿಂದ) ಸುನಿತಾ ಇದಕ್ಕೆ ಧನಿಗೂಡಿಸಿ ಅಂತಹ ಶಾಲೆಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಚ್ಚಾಡೋ ಅವರು ಕೆಲವೊಂದು ಖಾಸಗಿ ಶಾಲೆಗಳು ಶಿಕ್ಷಕರಿಗೆ ವೇತನ ನೀಡುವದಕ್ಕಾಗಿ ಶುಲ್ಕವನ್ನು ಪಾವತಿಸುವಂತೆ ಕೇಳುತ್ತಿದ್ದಾರೆ ಎಂದಾಗ ಸರ್ಕಾರದ ಸೂಚನೆ ಉಲ್ಲಂಘಿಸಿ ಶುಲ್ಕ ವಸೂಲಾತಿ ಎಷ್ಟು ಸರಿ ಎಂದು ಸದಸ್ಯರುಗಳು ಪ್ರಶ್ನಿಸಿದರು. ಈ ಬಗ್ಗೆ ತಾನು ಪರಿಶೀಲಿಸಿ ಕ್ರಮಕೈಗೊಳ್ಳುವದಾಗಿ ಮಚ್ಚಾಡೋ ಹೇಳಿದರು.
ಈ ಕುರಿತಾದ ಚರ್ಚೆ ನಡೆದು ಖಾಸಗಿ ಶಾಲೆಗಳು ಬಲವಂತವಾಗಿ ಪೋಷಕರಿಂದ ಶುಲ್ಕ ವಸೂಲಿ ಮಾಡಬಾರದು. ಜೊತೆಗೆ ಆನ್‍ಲೈನ್ ಶಿಕ್ಷಣದಲ್ಲಿ ಮಕ್ಕಳಿಗೆ ಶುಲ್ಕದ ನೆಪದಲ್ಲಿ ತಾರತಮ್ಯ ಮಾಡಬಾರದು ಎಂದು ಆದೇಶಿಸಲು ಸಭೆ ತೀರ್ಮಾನ ಕೈಗೊಂಡಿತು.
ಸದಸ್ಯರಾದ ಪುಟ್ಟರಾಜು ಅವರು ಬೆಸ್ಸೂರು ಸರ್ಕಾರಿ ಶಾಲೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರು ನಿಯೋಜನೆ ಮೇರೆ ತೆರಳಿದ್ದು, ಬೇರೆಯವರನ್ನಾದರೂ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು. ಜಿ.ಪಂ.ಸದಸ್ಯರಾದ ವಿಜು ಸುಬ್ರಮಣಿ ಕೋವಿಡ್-19 ನಿರ್ವಹಣೆಯನ್ನು ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅತ್ಯುತ್ತಮವಾಗಿ ನಿರ್ವಹಿಸುತ್ತಿದೆ ಎಂದರು. ಅಬ್ದುಲ್ ಲತೀಫ್ ಅವರು ಕೋವಿಡ್-19 ವಾರಿಯರ್ಸ್ ಆಗಿ ತಾನು ತೊಡಗಿಸಿಕೊಂಡು ಕೆಲಸ ನಿರ್ವಹಿಸಿದ್ದೇನೆ ಎಂದರು. ಇದಕ್ಕೆ ಹಲವು ಸದಸ್ಯರು ಅಭಿನಂದನೆ ಸಲ್ಲಿಸಿದರು.
ಕೋವಿಡ್-19 ನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದರೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ದೂರುಗಳು ಬರುತ್ತಿವೆ ಎಂದು ಲತೀಫ್ ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ಕೋವಿಡ್-19 ಪಾಸಿಟಿವ್ ಬಂದವರ ಸ್ಥಿರತೆಯನ್ನು ಗಮನಿಸಿ ಕೋವಿಡ್ ಆಸ್ಪತ್ರೆಗೆ ದಾಖಲಿಸಬೇಕೇ ಅಥವಾ ಮನೆಯಲ್ಲಿಯೇ ಇರಿಸಿ ಉಪಚರಿಸಬೇಕೇ ಎಂಬ ಬಗ್ಗೆ ನಿರ್ಧರಿಸಲಾಗುತ್ತದೆ. ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾದವರಿಗೆ ಊಟೋಪಚಾರ ಹೊರತುಪಡಿಸಿ, ಉಳಿದಂತೆ ಔಷಧಿ ಮತ್ತು ಮಾತ್ರೆಗಳು ರಾಜ್ಯದಿಂದ ಬರಲಿದೆ ಎಂದು ಮಾಹಿತಿ ನೀಡಿದರು.
ಸದಸ್ಯರಾದ ಸರೋಜಮ್ಮ ಮತ್ತು ಸುನಿತಾ ಅವರು ತಮ್ಮ ಜಿ.ಪಂ.ವ್ಯಾಪ್ತಿಯ ಶನಿವಾರಸಂತೆ ಮತ್ತು ಚೆಟ್ಟಳ್ಳಿ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದೆ ಪರದಾಡುವಂತಾಗಿದೆ. ವೈದ್ಯರನ್ನು ನಿಯೋಜಿಸಬೇಕು ಎಂದು ಹೇಳಿದರು. ಚೆಟ್ಟಳ್ಳಿ ಆಸ್ಪತ್ರೆಗೆ ಶ್ರುಶ್ರೂಷಕರನ್ನು, ಶನಿವಾರಸಂತೆಗೆ ವೈದ್ಯರನ್ನು ನೇಮಕ ಮಾಡಲಾಗುವುದು ಎಂದು ಡಿಎಚ್‍ಒ ಹೇಳಿದರು. ಶನಿವಾರಸಂತೆಯಲ್ಲಿ ಜನೌಷಧಿ ಕೇಂದ್ರ ಆರಂಭಿಸಬೇಕು ಎಂದು ಸರೋಜಮ್ಮ ಮನವಿ ಮಾಡಿದರು. ಸದಸ್ಯರಾದ ಪಂಕಜ ಕೋವಿಡ್-19 ನಿಂದ ಮೃತಪಟ್ಟವರನ್ನು ನೋಡಲು ಅವಕಾಶ ಮಾಡಬೇಕು ಎಂದು ಅವರು ಕೋರಿದರು.
ಜಿಲ್ಲೆಯಲ್ಲಿ ಮಳೆಗಾಲ ಮುಗಿದಿದ್ದು, ಈಗಲಾದರೂ ಲೋಕೋಪಯೋಗಿ ಇಲಾಖೆಯ ರಸ್ತೆ, ಸೇತುವೆ, ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹೊಸಮನೆ ಕವಿತಾ ಪ್ರಭಾಕರ್, ಸದಸ್ಯರಾದ ಶ್ರೀನಿವಾಸ್, ಕಿರಣ್ ಕಾರ್ಯಪ್ಪ, ಮುರಳಿ ಕರುಂಬಮ್ಮಯ್ಯ, ಪೂರ್ಣಿಮಾ ಗೋಪಾಲ್, ಅಪ್ಪಚಂಡ ಮಹೇಶ್, ಬಿ.ಜೆ.ದೀಪಕ್, ಪಂಕಜ, ಪ್ರಥ್ಯು ಅವರು ಒತ್ತಾಯಿಸಿದರು. ಪೂರ್ಣಿಮಾ ಗೋಪಾಲ್ ಮಾತನಾಡಿ ರಸ್ತೆಯನ್ನು ನಿರ್ಮಿಸುವಾಗ ಚರಂಡಿ ಕಾಮಗಾರಿಯನ್ನು ಕೈಗೊಳ್ಳಬೇಕು. ಗುಣಮಟ್ಟದ ಕಾಮಗಾರಿ ನಿರ್ವಹಿಸಬೇಕು ಎಂದು ಅವರು ಹೇಳಿದರು.
ಈ ಬಗ್ಗೆ ಮಾಹಿತಿ ನೀಡಿದ ಲೋಕೋಪಯೋಗಿ ಎಇಇ ಶಿವರಾಮ್ ಅವರು ಮಳೆ ಹಾನಿ ಕಾಮಗಾರಿಗಳ ಸಂಬಂಧ ಅಂದಾಜು ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ. ಜಿಲ್ಲಾಡಳಿತ ಅನುಮೋದನೆ ನೀಡಿದ ನಂತರ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದರು. ಜಿಲ್ಲೆಯಲ್ಲಿ ಕುಡಿಯುವ ನೀರು ಕಾಮಗಾರಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಹಣ ಪಾವತಿಸದಿರುವುದರಿಂದ ವಿದ್ಯುತ್ ಸಂಪರ್ಕ ಕಲ್ಪಿಸದೆ ಹಲವು ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ ಎಂದು ಜಿ.ಪಂ. ಹಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಸದಸ್ಯರಾದ ಪುಟ್ಟರಾಜು ಅವರು ಹಂಡ್ಲಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮವೊಂದರ ಕುಡಿಯುವ ನೀರಿಗೆ ವಿದ್ಯುತ್ ಸಂಪರ್ಕ ಕಲ್ಪಿಸದೆ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ ಎಂದು ಹೇಳಿದರು.
ಸೆಸ್ಕ್ ಕಾರ್ಯಪಾಲಕ ಅಭಿಯಂತರರಾದ ಸೋಮಶೇಖರ್ ವಿದ್ಯುತ್ ಸಂಪರ್ಕ ಕಲ್ಪಿಸಲು ಸುಮಾರು 75 ಕಾಮಗಾರಿಗಳ ಅರ್ಜಿ ಬಂದಿದ್ದು, ಹಣ ಪಾವತಿಸದಿರುವುದರಿಂದ ರದ್ದುಪಡಿಸಲಾಗಿದೆ ಎಂದು ತಿಳಿಸಿದರು. ಈ ಬಗ್ಗೆ ಮಾಹಿತಿ ನೀಡಿದ ಜಿ.ಪಂ.ಕಾರ್ಯಪಾಲಕ ಎಂಜಿನಿಯರ್ ಶ್ರೀಕಂಠಯ್ಯ ಅವರು ಫೆಬ್ರವರಿ ಅಂತ್ಯದೊಳಗೆ ವಿದ್ಯುತ್ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು. ಪಂಕಜ ಅವರು ಗಿರಿಜನ ಹಾಡಿಗಳಿಗೆ ಕುಡಿಯುವ ನೀರು ಕಾಮಗಾರಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಿದೆ ಎಂದು ಹೇಳಿದರು. ಈ ಬಗ್ಗೆ ಮಾಹಿತಿ ನೀಡಿದ ಐಟಿಡಿಪಿ ಇಲಾಖಾ ಅಧಿಕಾರಿ ಶಿವಕುಮಾರ್ ಅವರು ಗಂಗಾ ಕಲ್ಯಾಣ ಯೋಜನೆಯಡಿ 38 ಕಾಮಗಾರಿಗಳಿಗೆ ವಿದ್ಯುತ್ ಸಂಪರ್ಕಕ್ಕೆ ಬಾಕಿ ಇದೆ ಎಂದು ತಿಳಿಸಿದರು.
ಕಾನೂರು ಸಮೀಪದ ಬೊಮ್ಮಾಡು ಗಿರಿಜನ ಹಾಡಿಯಲ್ಲಿ ‘ಗ್ರಾಮ ಜ್ಯೋತಿ’ ಯೋಜನೆಯಡಿ ಎರಡು ಕೋಟಿ ಹಣ ಮಣ್ಣು ಪಾಲಾಗಿರುವ ಬಗ್ಗೆ ‘ಶಕ್ತಿ’ಯಲ್ಲಿ ಪ್ರಕಟಗೊಂಡ ವರದಿಯನ್ನು ಪತ್ರಿಕೆ ಸಹಿತವಾಗಿ ಪ್ರಸ್ತಾಪಿಸಿದ ಸದಸ್ಯ ಪ್ರಥ್ಯು ಈ ಬಗ್ಗೆ ಸೆಸ್ಕ್ ಕಾರ್ಯಪಾಲಕ ಅಭಿಯಂತರ ಸೋಮಶೇಖರ್ ಅವರಲ್ಲಿ ಸ್ಪಷ್ಟನೆ ಬಯಸಿದರು. ಈ ವೇಳೆ ಅಲ್ಲಿ ವಿದ್ಯುತ್ ವ್ಯವಸ್ಥೆ ಸಮರ್ಪಕವಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಸೋಮಶೇಖರ್ ಹೇಳಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪ್ರಥ್ಯು ತಾನೇ ಇತ್ತೀಚೆಗೆ ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಿದ್ದು, ಗ್ರಾಮಜ್ಯೋತಿ ಯೋಜನೆ ಅಲ್ಲಿ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ.
ಸೋಲಾರ್ ಘಟಕ ಕಾಡುಪಾಲಾಗಿದೆ ಎಂದರು. ‘ಪೇಪರ್‍ನಲ್ಲಿ ಬರೋದನ್ನೆಲ್ಲ ಒಪ್ಪಿಕೊಳ್ಳೊಕೆ ಆಗಲ್ಲ ಸರ್’ ಎಂದು ಸೋಮಶೇಖರ್ ಅವರು ಪ್ರಥ್ಯು ಅವರ ಆರೋಪವನ್ನು ಒಪ್ಪಿಕೊಳ್ಳದಿದ್ದಾಗ ಮಧ್ಯಪ್ರವೇಶಿಸಿದ ಸದಸ್ಯ ಶಿವುಮಾದಪ್ಪ ಅಲ್ಲಿ ‘ಸಮಸ್ಯೆ ಇಲ್ಲ ಎನ್ನುವದಾದರೆ ಪೇಪರ್‍ನವ್ರು ಸುಮ್ನೆ ಬರಿತಾರೇನ್ರಿ’ ಎಂದು ಪ್ರಶ್ನಿಸಿದಾಗ ಅದು ಗೊತ್ತಿಲ್ಲ ಸರ್ ಎಂದು ಸೋಮಶೇಖರ್ ಉತ್ತರಿಸಿದರು. ಬೊಮ್ಮಾಡು ಕಾಲೋನಿಯಲ್ಲಿ ಗ್ರಾಮಜ್ಯೋತಿ ಯೋಜನೆ ಅನುಷ್ಠಾನವಾಗದ ಬಗ್ಗೆ ಹಾಗೂ ಯೋಜನೆ ಹೆಸರಿನಲ್ಲಿ ವೆಚ್ಚವಾಗಿರುವ 1 ಕೋಟಿ 47 ಲಕ್ಷ ಹಣದ ಬಗ್ಗೆ ತನಿಖೆ ಆಗಬೇಕೆಂದು ಪ್ರಥ್ಯು ಆಗ್ರಹಿಸಿದರು. ಈ ಬಗ್ಗೆ ತನಿಖೆ ಕೈಗೊಳ್ಳಲು ನಿರ್ಣಯ ದಾಖಲಿಸುವಂತೆ ಅಧ್ಯಕ್ಷ ಹರೀಶ್ ಹೇಳಿದರು.